

ಜಿ.ನಾಗರಾಜ್, ಬೂದಿಕೋಟೆ
ಮುಂಗಾರು ಮಳೆ ಈ ಬಾರಿ ನಿಗದಿಗಿಂತ ಉತ್ತಮವಾಗಿ ಸುರಿದಿರುವುದರಿಂದ ಬಿತ್ತನೆ ಮಾಡಿದ್ದ ಶೇಂಗಾ ಸಮೃದ್ಧವಾಗಿ ಬೆಳೆದಿದ್ದು, ರೈತರು ಉತ್ತಮ ಇಳುವರಿ ನಿರೀಕ್ಷೆಯಲ್ಲ್ಲದ್ದಾರೆ.
ಬರಗಾಲದಿಂದ ಕಂಗೆಟಿದ್ದ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಉತ್ತಮವಾಗಿರುವ ಕಾರಣ ನಗರಗಳಿಗೆ ವಲಸೆ ಹೋಗಿದ್ದ ಹಲವರು ಹಳ್ಳಿಗಳಿಗೆ ಮರಳಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಈ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಬಂಗಾರಪೇಟೆ ತಾಲೂಕಿನಲ್ಲಿನ 203 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, 9053 ಹೆಕ್ಟೇರ್ ಪ್ರದೇಶದಲ್ಲಿ ರಾಗಿ, 420 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 747 ಹೆಕ್ಟೇರ್ ಪ್ರದೇಶದಲ್ಲಿ ಅವರೆ, 93 ಹೆಕ್ಟೇರ್ ಪ್ರದೇಶದಲ್ಲಿ ಅಲಸಂದೆ ಸೇರಿ ಒಟ್ಟು 1260 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯ ಬಿತ್ತನೆ ಮಾಡಿದ್ದಾರೆ.
ಉತ್ತಮ ಮಳೆ: ಸಕಾಲಕ್ಕೆ ಉತ್ತಮ ಮಳೆಯಾದ ಕಾರಣ ರಾಗಿ, ಶೇಂಗಾ, ತೊಗರಿ, ಅವರೆ ಸೇರಿ ಎಲ್ಲ ಬೆಳೆಗಳು ಸಮೃದ್ಧವಾಗಿ ಬೆಳೆದಿದ್ದು, ಮೊದಲು ಬಿತ್ತನೆ ಮಾಡಿದ್ದ ಶೇಂಗಾ ಬೆಳೆ ಯಾವುದೇ ಕೀಟಗಳ ಬಾಧೆ ಇಲ್ಲದೆ ಕೊಯ್ಲಿನ ಹಂತಕ್ಕೆ ತಲುಪಿದೆ. ಬಂಗಾರಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಕೃಷಿ ಇಲಾಖೆ ಕೃಷಿ ಸಂಪರ್ಕ ಕೇಂದ್ರಗಳ ಮೂಲಕ ಸುಮಾರು 75 ಕ್ವಿಂಟಾಲ್ ಶೇಂಗಾ ಬಿತ್ತನೆ ಬೀಜ ವಿತರಣೆ ಮಾಡಿದ್ದು, 203 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.
ಶೇಂಗಾ ಕಟಾವು: ಬಿತ್ತನೆ ಕಾರ್ಯ ಮುಗಿದು ಕಳೆ ತೆಗೆದು, ಕಾಳು ಕಟ್ಟುವ ಸಮಯದಲ್ಲಿ ಮಳೆ ಇಲ್ಲದೆ ಬಾಡುತ್ತಿದ್ದ ಬೆಳೆಗೆ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜೀವ ಪಡೆದು ಕಂಗೊಳಿಸುತ್ತಿವೆ. ಬೂದಿಕೋಟೆ ಹೋಬಳಿಯ ಕೆಲವೆಡೆ ಶೇಂಗಾ ಕಟಾವು ಮಾಡಲಾಗುತ್ತಿದ್ದು, 15 ದಿನಗಳಲ್ಲಿ ಸಾಕಷ್ಟು ಬೆಳೆ ಕಟಾವು ಮಾಡುವ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಇದೇ ರೀತಿ ಮಳೆ ಮುಂದುವರಿದರೆ ಕಷ್ಟ ಪಟ್ಟು ಬೆಳೆ ಮನೆ ಸೇರತ್ತೆ ಅನ್ನುವುದು ರೈತರ ನಿರೀಕ್ಷೆಯಾಗಿದೆ.
ಈ ಬಾರಿ ಉತ್ತಮ ಮಳೆಯಾದ ಕಾರಣ ಕೃಷಿ ಇಲಾಖೆಯಿಂದ ಉತ್ತಮ ತಳಿಯ ಶೇಂಗಾ ಬಿತ್ತನೆ ಬೀಜ ವಿತರಣೆ ಮಾಡಲಾಗಿತ್ತು. ರೈತರೂ ಸಮಯಕ್ಕೆ ಅನುಗುಣವಾಗಿ ಬಿತ್ತನೆ ಮಾಡಿ ಆರೈಕೆ ಮಾಡಿದ ಕಾರಣ ಉತ್ತಮ ಬೆಳೆ ಬಂದಿದೆ. ಕಟಾವು ಮಾಡಿದ ರೈತರಿಗೆ ಉತ್ತಮ ಇಳುವರಿ ಸಹ ಬಂದಿದ್ದು, ಮುಂದಿನ 15 ದಿನಗಳಲ್ಲಿ ಎಲ್ಲ ಕಡೆ ಕಟಾವು ಕಾರ್ಯ ಮುಗಿಯುತ್ತದೆ. ಬಿ.ವಿ.ವಿಜಯಕುಮಾರ್, ಕೃಷಿ ಅಧಿಕಾರಿ ಬೂದಿಕೋಟೆ ಪ್ರತಿವರ್ಷ ಮುಗಾರು ಕೈಕೊಡುತ್ತಿತ್ತು. ಈ ಬಾರಿ ಉತ್ತಮ ಮಳೆಯಾಗಿದೆ. ಕೃಷಿ ಇಲಾಖೆಯಿಂದ ಪೂರೈಕೆಯಾದ ಬಿತ್ತನೆ ಬೀಜ ಸಹ ಗುಣಮಟ್ಟದಿಂದ ಕೂಡಿದ ಕಾರಣ ಯಾವುದೇ ರೋಗ ಹಾಗೂ ಕೀಟದ ಬಾಧೆ ಇಲ್ಲದೆ ಶೇಂಗಾ ಬೆಳೆ ಚೆನ್ನಾಗಿ ಬಂದಿದೆ. ಪ್ರತಿ ಗಿಡಕ್ಕೆ 40ಕ್ಕೂ ಮೇಲ್ಪಟ್ಟು ಕಾಯಿಗಳಿದ್ದು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದೇವೆ. ಶಿವಕುಮಾರ್, ರೈತ ತೀತುಬನಹಳ್ಳಿ