

ಗಂಗಾಧರ್ ಬೈರಾಪಟ್ಟಣ ರಾಮನಗರ
ದೀನ್ ದಯಾಳ್ ಅಂತೋದ್ಯಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ - ನಲ್ಮ್) ಅಡಿಯಲ್ಲಿ ರಾಮನಗರದಲ್ಲಿ ತೆರೆಯಲಾಗಿದ್ದ ಸಾಲುಮರದ ತಿಮ್ಮಕ್ಕ ಆಶ್ರಯ ಕೇಂದ್ರ ಅನುದಾನ ಇಲ್ಲದೆ ಬಂದ್ ಆಗಿದೆ.
ನಗರದ ಪಿಎಲ್‌ಡಿ ಬ್ಯಾಂಕ್ ಸಮೀಪದ ಬಾಡಿಗೆ ಕಟ್ಟಡದಲ್ಲಿ ಕಳೆದ 5 ವರ್ಷಗಳಿಂದ ನಡೆಯುತ್ತಿದ್ದ ಆಶ್ರಯ ಕೇಂದ್ರ ನಗರದ ನಿರಾಶ್ರಿತರಿಗೆ ರಕ್ಷಣಾ ಕೇಂದ್ರದಂತೆ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಸ್ಥಳೀಯ ನಗರಸಭೆ ಅನುದಾನ ಬಿಡುಗಡೆ ಮಾಡಲು ನಿರ್ಧಾರ ಮಾಡಿರುವ ಹಿನ್ನೆಲೆಯಲ್ಲಿ ಜ.31ಕ್ಕೆ ಬಾಗಿಲು ಹಾಕಿದ್ದು, ರಾತ್ರಿ ವೇಳೆಯಲ್ಲಿ ಬರುವ ನಿರಾಶ್ರಿತರಿಗೆ ಬಸ್ ನಿಲ್ದಾಣ ಇಲ್ಲವೇ, ಯಾವುದೋ ಜಗಲಿ ಆಶ್ರಯ ತಾಣವಾಗಬೇಕಿದೆ.
ನಗರ ಪ್ರದೇಶದಲ್ಲಿ ನಿರಾಶ್ರಿತರಾಗಿರುವವರಿಗೆ ಆಶ್ರಯ ನೀಡುವ ಸಲುವಾಗಿ 5 ವರ್ಷಗಳ ಹಿಂದೆ ದೇಶದಾದ್ಯಂತ ಡೇನಲ್ಮ್ ಯೋಜನೆಯಡಿ ನಿರಾಶ್ರಿತ ಕೇಂದ್ರಗಳನ್ನು ಆರಂಭಿಸಲಾಗಿತ್ತು. ರಾಮನಗರದಲ್ಲಿಯೂ ಮಹಿಳೆ ಮತ್ತು ಪುರುಷರಿಗಾಗಿ ಪ್ರತ್ಯೇಕ ಕೇಂದ್ರಗಳನ್ನು ತೆರೆಯಲಾಗಿತ್ತು. ಕಳೆದ ಎರಡು ವರ್ಷಗಳ ಹಿಂದೆಯೇ ಒಂದು ಕೇಂದ್ರ ಮುಚ್ಚಿದರೆ, ನಗರದ ಪಿಎಲ್‌ಡಿ ಬ್ಯಾಂಕ್ ರಸ್ತೆಯಲ್ಲಿರುವ ಸಾಲುಮರದ ತಿಮ್ಮಕ್ಕ ನಿರಾಶ್ರಿತ ಕೇಂದ್ರ ಜ.31ರವರೆಗೂ ಕಾರ್ಯನಿರ್ವಹಿಸುತ್ತಿತ್ತು.
ಈ ಕೇಂದ್ರ ನಿರ್ವಹಣೆಗೆ ಬೇಕಾದ ಅನುದಾನವನ್ನು ಕೇಂದ್ರ ಸರ್ಕಾರವೇ ಭರಿಸುತಿತ್ತು. ಆದರೆ, ಇತ್ತೀಚೆಗೆ ಸ್ಥಳೀಯ ಮೂಲದಿಂದಲೇ ನಿರಾಶ್ರಿತ ಕೇಂದ್ರದ ನಿರ್ವಹಣೆ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಮನಗರ ನಗರಸಭೆ ಸಭೆ ನಡೆಸಿ ಈ ಬಗ್ಗೆ ಚರ್ಚೆ ನಡೆಸಿದ್ದು, ಸದಸ್ಯರು ಅನುದಾನ ನೀಡಲು ಒಪ್ಪಲಿಲ್ಲ. ಈ ಕಾರಣದಿಂದಾಗಿ ನಿರಾಶ್ರಿತರಿಗೆ ಆಶ್ರಯ ನೀಡುತಿದ್ದ ಕೇಂದ್ರ ಈಗ ಏಕಾಏಕಿ ಬಾಗಿಲು ಬಂದ್ ಮಾಡಿದೆ.
ಅನ್ಯ ಊರುಗಳಿಂದ ಉದ್ಯೋಗ ಅರಸಿ ಬಂದು, ಇಲ್ಲವೇ ತಮ್ಮದೇ ಊರಿನಲ್ಲಿ ಸೂರು ಇಲ್ಲದವರಿಗೆ ತಾತ್ಕಾಲಿಕ ಆಶ್ರಯ ನೀಡುವ ಕೇಂದ್ರವಾಗಿ ಇದು ಹೆಸರು ಮಾಡಿತ್ತು. ಪ್ರತಿದಿನ ಕನಿಷ್ಠ 20ರಿಂದ ಗರಿಷ್ಠ 60 ಮಂದಿ ಇಲ್ಲಿ ಬಂದು ತಂಗುತ್ತಿದ್ದರು. ಇಲ್ಲಿ ನೀರು, ಶೌಚಗೃಹ, ಮನರಂಜನೆಗೆ ಟಿವಿ, ಹಾಸಿಗೆ ಸೌಲಭ್ಯವನ್ನು ನೀಡಲಾಗುತ್ತಿತ್ತು. ಅಲ್ಲದೆ, ಕೌಶಲ ತರಬೇತಿ ನೀಡುವ ಕೆಲಸವೂ ನಡೆಯುತ್ತಿತ್ತು ಎನ್ನಲಾಗಿದೆ. ಇದರಿಂದಾಗಿ ಬಸ್ ನಿಲ್ದಾಣ, ರೈಲು ನಿಲ್ದಾಣ, ಪಾರ್ಕ್ ಹಾಗೂ ಇತರ ಸಾರ್ವಜನಿಕ ಸ್ಥಳದಲ್ಲಿ ರಾತ್ರಿ ವೇಳೆ ಭಯದಲ್ಲಿಯೇ ಕಳೆಯಬೇಕಿದ್ದ ನಿರಾಶ್ರಿತರಿಗೆ ಇದು ರಕ್ಷಣಾ ಕೇಂದ್ರವೇ ಆಗಿತ್ತು.
ನಗರಸಭೆ ಅನುದಾನ ನೀಡದ ಹಿಂದೆ ಸ್ಥಳೀಯ ರಾಜಕೀಯವೂ ಅಡಗಿದೆ ಎನ್ನಲಾಗಿದೆ. ಇದರ ಜತೆಗೆ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದವರೂ ಕೇಂದ್ರವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿರಲಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಹಲವಾರು ಮಂದಿಗೆ ಸುರಕ್ಷತೆಯ ತಾಣವಾಗಿದ್ದ ಈ ಕೇಂದ್ರದ ನಿರ್ವಹಣೆಗೆ ಅನುದಾನ ನೀಡಲು ನಿರಾಕರಿಸಿದೆ ಎಂದು ತಿಳಿದು ಬಂದಿದೆ.
ಲಭ್ಯ ಮಾಹಿತಿ ಪ್ರಕಾರ ಆಶ್ರಯ ಕೇಂದ್ರವನ್ನು ಪುನರಾರಂಬಿಸುವ ಸಲುವಾಗಿ ಮುಂದಿನ ಸಭೆಯಲ್ಲಿ ವಿಷಯ ಮಂಡನೆ ಮಾಡಲು ನಗರಸಭೆ ಮುಂದಾಗಿದೆ ಎಂದು ತಿಳಿದು ಬಂದಿದೆ. ಈ ಕೇಂದ್ರ ಹಲವಾರು ಬಡವರಿಗೆ ಆಶ್ರಯ ನೀಡುವುದರಿಂದ ಪುನರಾರಂಭಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಕೇಂದ್ರ ಸರ್ಕಾರ ನಿರ್ವಹಣೆಯನ್ನು ಸ್ಥಳೀಯ ಸಂಪನ್ಮೂಲದಿಂದಲೇ ಭರಿಸುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ನಗರಸಭೆ ಕೌನ್ಸಿಲ್ ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಲಾಗಿತ್ತು. ಸಭೆ ಅನುದಾನ ನೀಡಲು ನಿರಾಕರಿಸಿದೆ.
ಎಲ್.ನಾಗೇಶ್, ಆಯುಕ್ತರು, ನಗರಸಭೆ ರಾಮನಗರ
--
ನಗರಸಭೆ ಅನುದಾನ ನೀಡುವುದಿಲ್ಲ ಎಂದ ಹಿನ್ನೆಲೆಯಲ್ಲಿ ಇನ್ನು ನಿಲ್ಲಿಸಲಾಗಿದೆ. ಇದು ಬಡವರ ಪಾಲಿಗೆ ರಕ್ಷಣೆ ನೀಡುವ ಕೇಂದ್ರ. ನಿರ್ವಹಣೆ ಜವಾಬ್ದಾರಿ ನನಗೇ ನೀಡಬೇಕು ಎಂದೇನೂ ಇಲ್ಲ. ಯಾರಿಗೆ ನೀಡಿದರೂ ಒಳ್ಳೆಯದೆ. ಇದರಿಂದ ಹಲವಾರು ಮಂದಿಗೆ ನೆರವಾಗಲಿದೆ.
ರುದ್ರದೇವರು, ನಿರ್ವಹಣೆ ಟೆಂಡರ್ ಪಡೆದಿದ್ದವರು
==