

ರೋಣ: ಪಟ್ಟಣದ ಹುಲ್ಲೂರ ರಸ್ತೆಯಲ್ಲಿ ವಾಜಪೇಯಿ ವಸತಿ ಯೋಜನೆಯಡಿ ನಿರ್ಮಿಸಲಾದ ಮನೆಗಳನ್ನು ತೆರವುಗೊಳಿಸಿ ಸ್ಲಂ ಬೊರ್ಡ್‌ನಿಂದ ಹೊಸದಾಗಿ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಮಂಗಳವಾರ ಪುರಸಭೆಯ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಆಶ್ರಯ ಸಮಿತಿ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ಅವರು, 2012- 13ನೇ ಸಾಲಿನಲ್ಲಿ ಒಟ್ಟು 740 ಮನೆಗಳನ್ನು ನಿರ್ಮಿಸಲಾಗಿದೆ. ಇಲ್ಲಿಯವರೆಗೂ 165 ಮನೆಗಳು ಹಕ್ಕುಪತ್ರ ನೋಂದಣೆಯಾಗಿಲ್ಲ. ಕೆಲವು ಫಲಾನುಭವಿಗಳ ಬಳಿ ಹಕ್ಕುಪತ್ರದ ಮೂಲ ಪ್ರತಿ ಇಲ್ಲ. ಇವೆಲ್ಲವುಗಳನ್ನು ಪರಿಶೀಲಿಸಿ ಅರ್ಹರನ್ನು ಗುರುತಿಸಿ ಶಿಥಿಲಾವಸ್ಥೆಯಲ್ಲಿರುವ ಮನೆಗಳನ್ನು ತೆರವುಗೊಳಿಸಿ, ಹೊಸ ಮನೆ ಕಟ್ಟಿಕೊಡಲಾಗುವುದು ಎಂದರು.
2018ರಿಂದ 23ರವರೆಗೆ ರೋಣ ತಾಲೂಕಿನಲ್ಲಿ ಆಶ್ರಯ ಮನೆಗಳ ನಿರ್ಮಾಣ ಕುಂಠಿತಗೊಂಡಿತ್ತು. ನರೇಗಲ್ಲ ಪಟ್ಟಣದಲ್ಲಿ 300 ನಿವೇಶನ ಹಂಚಿಕೆಯಾಗಬೇಕಿದೆ. ರೋಣ, ಗಜೇಂದ್ರಗಡ, ನರೇಗಲ್ಲ ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆ ಪಾರದರ್ಶಕವಾಗಿಲ್ಲ ಎಂದರು.
ಆಶ್ರಯ ಸಮಿತಿ ಈಗ ರಚನೆಯಾಗಿದ್ದು, ನಿಜವಾದ ಫಲಾನುಭವಿಗಳನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡುವಂತೆ ಸದಸ್ಯರು ಹೇಳಿದ್ದಾರೆ. 50 ವರ್ಷಗಳಿಂದ ವಾಸವಿರುವ ನಿವೇಶನ ರಹಿತರಿಗೆ ಮೊದಲ ಆದ್ಯತೆ ನೀಡಬೇಕು. ನಂತರ ಉಳಿದವರನ್ನು ಪರಿಗಣಿಸಬೇಕು. ನಿವೇಶನ ರಹಿತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂಬುದು ಸದಸ್ಯರ ಅಭಿಪ್ರಾಯವಾಗಿದೆ ಎಂದು ಶಾಸಕರು ಹೇಳಿದರು. ಗಜೇಂದ್ರಗಡ, ನರೇಗಲ್ಲ, ರೋಣ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರು, ಆಶ್ರಯ ಸಮಿತಿಯ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.