

ಬೆಳ್ತಂಗಡಿ: ತಾಲೂಕಿನ ಅಳದಂಗಡಿ ಹಿಂದು ಆಲಡ್ಕ ಕ್ಷೇತ್ರ ಸಂಘಟನೆಯ ಮೂಲಕ ಓರ್ವ ಅನಾಥ ವೃದ್ಧರನ್ನು ಶ್ರೀಗುರು ಚೈತನ್ಯ ಸೇವಾಶ್ರಮಕ್ಕೆ ಸೇರಿಸಿ ಆಶ್ರಯ ಕಲ್ಪಿಸಲಾಯಿತು.
ಬಡಗಕಾರಂದೂರು ಗ್ರಾಮದ ಕೆದ್ದು ಎಂಬಲ್ಲಿ ಬಾಡ ಎಂಬ ವೃದ್ಧರು ನಿರ್ಗತಿಕರಾಗಿ ಹಲವಾರು ವಷರ್ಗಳಿಂದ ಅಂಗಡಿ ಮುಂಗಟ್ಟುಗಳ ಮುಂಭಾಗ, ಮರಗಳ ಕೆಳಗೆ ಅನಾಥವಾಗಿ ಇರುತ್ತಿದ್ದರು. ಯಾರಿಂದಲೂ ಕೈ ಚಾಚದೆ, ಯಾರಿಗೂ ಕಿರಿಕಿರಿ ಉಂಟು ಮಾಡದೆ ಸ್ವಾಭಿಮಾನಿಯಾಗಿದ್ದು ಬಾಡಜ್ಜ ಎಂದು ಸಾರ್ವಜನಿಕರಿಂದ ಕರೆಯಲ್ಪಡುತ್ತಿದ್ದರು. ಕೆಲವು ದಿನಗಳಿಂದ ವಿಪರೀತವಾಗಿ ನಿಶ್ಶಕ್ತರಾಗಿದ್ದರು. ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಅಳದಂಗಡಿ ಸಮಾಜ ಸೇವಾ ಸಂಘಟನೆಯು ಅಳದಂಗಡಿ ಗ್ರಾಪಂಗೆ ಮಾಹಿತಿ ನೀಡಿ ವೇಣೂರು ಗುಂಡೂರಿಯ ಶ್ರಿ ಗುರು ಚೈತನ್ಯ ಸೇವಾಶ್ರಮದ ಹೊನ್ನಯ್ಯ ಕುಲಾಲ್ ಕಾಟಿಪಳ್ಳರ ಮಾರ್ಗದರ್ಶನದಲ್ಲಿ ವೇಣೂರಿನ ಪೊಲೀಸ್ ಠಾಣೆಗೆ ತಿಳಿಸಿ ವೀರಕೇಸರಿ ಬಳಂಜ ಇವರ ಆಂಬುಲೆನ್ಸ್‌ನಲ್ಲಿ ಕರೆದೊಯ್ದು ವೇಣೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಯಿತು. ಬಳಿಕ ಶ್ರೀಗುರು ಚೈತನ್ಯ ಸೇವಾಶ್ರಮಕ್ಕೆ ಸೇರ್ಪಡೆಗೊಳಿಸಲಾಯಿತು.
ಸಂಘಟನೆಯ ಅಧ್ಯಕ್ಷ ದೇವದಾಸ್ ಸಾಲ್ಯಾನ್ ಮತ್ತು ಅಳದಂಗಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಜೆ, ಗ್ರಾಮ ಪಂ. ಸದಸ್ಯರಾದ ಹರೀಶ್ ಆಚಾರ್ಯ ಮಿತ್ತರೋಡಿ, ಅಳದಂಗಡಿ ಆಟೋ ಚಾಲಕ-ಮಾಲೀಕರ ಸಂಘದ ಅಧ್ಯಕ್ಷ ಕೊರಗಪ್ಪ, ಸಾಮಾಜಿಕ ಕಾರ್ಯಕರ್ತೆ ಹರಿಣಿ ಲಕ್ಷ್ಮಣ ಪೂಜಾರಿ, ಕೀರ್ತನ್ ಸಹಕರಿಸಿದರು.
ಈ ಅನಾಥ ವೃದ್ಧರ ಬಂಧುಬಳಗದವರ ಮಾಹಿತಿ ಇದ್ದಲ್ಲಿ ವೇಣೂರು ಪೊಲೀಸ್ ಠಾಣೆಗೆ ನೀಡಿ ಸಹಕರಿಸಬೇಕು ಎಂದು ಶ್ರೀಗುರು ಚೈತನ್ಯ ಸೇವಾಶ್ರಮದ ಹೊನ್ನಯ್ಯ ವಿನಂತಿಸಿದ್ದಾರೆ.