

ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಹೋಬಳಿ ಯಾಳನಹಳ್ಳಿ ಗ್ರಾಮದ ಹಲವು ಕುರಿಗಳಲ್ಲಿ ಪಿಪಿಆರ್ ರೋಗ(ಬಾಯಿ ಹುಣ್ಣು) ಕಾಣಿಸಿಕೊಂಡಿದ್ದು, ಕಳೆದ ಒಂದು ವಾರದಲ್ಲಿ ಸುಮಾರು 10ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ.
ಕುರಿಗಳ ಬಾಯಿ ಸುತ್ತ ಮೊದಲು ಬಾಯಿ ಹುಣ್ಣು ಕಾಣಿಸಿಕೊಳ್ಳುತ್ತಿದ್ದು, ಮೇವು ತಿನ್ನುವುದನ್ನೆ ನಿಲ್ಲಿಸುತ್ತಿವೆ. ನಂತರ ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆಯ ಅನುಭವಿಸುವ ಕುರಿಗಳಿಗೆ ಭೇದಿಯಾಗುತ್ತಿದೆ. ಈ ರೋಗ ಬಂದ ನಾಲ್ಕರಿಂದ ಐದು ದಿನದಲ್ಲಿ ಕುರಿಗಳು ಸಾಯುತ್ತಿವೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಗ್ರಾಮದ ತಿಮ್ಮೇಗೌಡ, ರಂಗಸ್ವಾಮಿ ಹಾಗೂ ಮಹದೇವ್ ಎಂಬವರಿಗೆ ಸೇರಿದ 10 ಕರಿಗಳು ಈ ರೋಗ ಬಾಧೆಯಿಂದ ಮೃತಪಟ್ಟಿವೆ. ಜತೆಗೆ ಗ್ರಾಮದಲ್ಲಿ ಈಗಾಗಲೇ ಸುಮಾರು 50 ಕುರಿಗಳು ಈ ರೋಗದಿಂದ ಬಳಲುತ್ತಿವೆ. ಪಶುಪಾಲನಾ ಇಲಾಖೆಯ ಕೆಲ ಸಿಬ್ಬಂದಿಗಳು ಹೆಚ್ಚಿಗೆ ಹಣ ಪಡೆದು ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮದ ನಿವಾಸಿ ಮಂಜುನಾಥ್.
ಈ ರೋಗ ಕಾಣಿಸಿಕೊಂಡ ದಿನದಿಂದ ಜಿನ್ನೇನಹಳ್ಳಿ ಪಶು ಆಸ್ಪತ್ರೆಯ ವೈದ್ಯರಿಗೆ ದೂರವಾಣಿ ಕರೆ ಮಾಡಿದರೂ, ಅವರು ಕರೆಯನ್ನು ಸ್ವೀಕರಿಸುತ್ತಿಲ್ಲ. ಗ್ರಾಮಕ್ಕೂ ಬಂದು ರೋಗಕ್ಕೆ ತುತ್ತಾಗಿರುವ ಕುರಿಗಳಿಗೆ ಚಿಕಿತ್ಸೆ ನೀಡುತ್ತಿಲ್ಲ ಎಂದು ಗ್ರಾಮದ ವಿಶ್ವನಾಥ ದೂರಿದರು. ಸದ್ಯ ಕುರಿ ಸಾಕಾಣಿಕೆಯನ್ನೆ ನಂಬಿಕೊಂಡಿದ್ದ ರೈತರು ಇದರಿಂದ ಕಂಗಾಲಾಗಿದ್ದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಕುರಿಗಳಲ್ಲಿ ಕಾಣಿಸಿಕೊಂಡಿರುವ ರೋಗಕ್ಕೆ ಔಷಧಿ ಒದಗಿಸುವ ಮೂಲಕ ನೆರವಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.