ವಲಸೆ ಕುರಿ, ಕುರಿಗಾಹಿ ಕುಟುಂಬಗಳಿಗೆ ಕಿರುಕುಳ

HY19SHEEP1
Published on

ತುಮಕೂರು: ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಕೃಷಿಗೆ ಪೂರಕ ಕಸುಬಾಗಿ ಗುರುತಿಸಿಕೊಂಡಿರುವ 10 ಸಾವಿರಕ್ಕೂ ಹೆಚ್ಚು ಕುರಿಗಾಹಿ ಕುಟುಂಬಗಳು ರಾಜ್ಯದ ನಾನಾ ಮೂಲೆಗಳಲ್ಲಿ ತೊಂದರೆಗೆ ಸಿಲುಕಿವೆ. ಕರೊನಾ ಸೊಂಕು ಪ್ರಾಣಿಗಳಿಂದಲೂ ಹರಡುತ್ತದೆ ಎಂದು ತಗಾದೆ ತೆಗೆಯುತ್ತಿರುವ ಅಲ್ಲಿನ ಸ್ಥಳೀಯರು ಕುರಿ ಮೇಯಿಸಲು ಪರ ಸ್ಥಳಗಳಿಗೆ ತೆರಳಿರುವ ಕುರಿಗಾಹಿಗಳ ಮೇಲೆ ಹಲ್ಲೆ ಕೂಡ ನಡೆಸುತ್ತಿದ್ದಾರೆ.

ಶಿರಾ, ಹಿರಿಯೂರು, ಚಿಕ್ಕನಾಯಕನಹಳ್ಳಿ, ಮಧುಗಿರಿ, ಹೊಸದುರ್ಗ, ಚಳ್ಳಕೆರೆ ಭಾಗದಿಂದ ತೆರಳಿರುವ ಕುರಿಗಾಹಿಗಳಿಗೆ ಹಾಸನ, ಶಿವಮೊಗ್ಗ, ಪಿರಿಯಾಪಟ್ಟಣ, ಹುಣಸೂರು, ರಾಮನಾಥಪುರ ಹಾಗೂ ಕೆ.ಆರ್.ನಗರ ಭಾಗದಲ್ಲಿ ದೌರ್ಜನ್ಯ ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ.

ಪರಸ್ಥಳದಲ್ಲಿ ಜನರ ಆಕ್ರೋಶಕ್ಕೆ ತುತ್ತಾಗಿರುವ ಕುರಿಗಾಹಿಗಳು ತಮ್ಮೂರಿಗೆ ತೆರಳಲು ಸಿದ್ಧರಾಗಿದ್ದರೂ ಆಯಾ ಜಿಲ್ಲಾಡಳಿತಗಳು ಅವಕಾಶ ನೀಡುತ್ತಿಲ್ಲ.

ತುಮಕೂರು ಜಿಲ್ಲೆಯಲ್ಲಿ 20 ಲಕ್ಷಕ್ಕೂ ಹೆಚ್ಚು ಕುರಿ, ಮೇಕೆಗಳನ್ನು ಸಾಕಲಾಗುತ್ತಿದೆ. ಬೇಸಿಗೆ ಸಂದರ್ಭದಲ್ಲಿ ಅಷ್ಟೊಂದು ಕುರಿಗಳಿಗೆ ಮೇವು ಒದಗಿಸುವ ಸಲುವಾಗಿ ಭತ್ತದ ಸೀಮೆಗಳಿಗೆ ವಲಸೆ ಹೋಗಿ ಮಳೆಗಾಲದಲ್ಲಿ ಮತ್ತೆ ಸ್ವಗ್ರಾಮಗಳಿಗೆ ವಾಪಸಾಗುವುದು ವಾಡಿಕೆ. ಮತ್ತೆ ಕೆಲವು ಕುಟುಂಬಗಳು ವರ್ಷಪೂರ್ತಿ ಪ್ರವಾಸದಲ್ಲಿಯೇ ಬದುಕು ಸವೆಸುವುದು ಇದೆ. ಇಂತಹ 10,000ಕ್ಕೂ ಹೆಚ್ಚು ಕುಟುಂಬಗಳು ಈಗ ಸಂಕಷ್ಟಕ್ಕೆ ತುತ್ತಾಗಿವೆ.

ಮಂಗಳವಾರ ಕುಣಿಗಲ್ ಪಟ್ಟಣದ ಸಮೀಪ ಹೊಸದುರ್ಗ ತಾಲೂಕು ಅರಗೂರು ಚಿಕ್ಕಯ್ಯ ಎಂಬುವವರ ಕುರಿ ಮಂದೆ ಮೇಲೆ ಕುಡುಕರ ಗುಂಪೊಂದು ದಾಳಿ ಮಾಡಿ ಹಲ್ಲೆ ನಡೆಸಿದೆ. ಚಾಮರಾಜನಗರ ಹೊರಭಾಗದಲ್ಲಿ ಬುಕ್ಕಾಪಟ್ಟಣ ಹೋಬಳಿ ಬೆಳ್ಳಾರ್ ಕ್ಯಾತಪ್ಪ ಎಂಬುವವರ ಗುಂಪಿನ ಮೇಲೆ ದಾಳಿ ನಡೆಸಲಾಗಿದೆ.

ಶಿರಾ ತಾಲೂಕು ಮಾಗೂಡು ಗೊಲ್ಲರಹಟ್ಟಿಯಲ್ಲಿ ತಾಯಿ ಸಾವಿಗೂ ಬರಲಾಗದೆ ಹಾಸನ ತಾಲೂಕು ದುದ್ದ ಬಳಿ ಪುತ್ರ ಕಾಟಯ್ಯ ಮಂಗಳವಾರ ಪರದಾಡಿದ್ದಾರೆ.

ಸಿದ್ದರಾಮಯ್ಯ ಟ್ವೀಟ್!: ಕುರಿಗಾಹಿಗಳ ಸಮಸ್ಯೆಗಳ ಬಗ್ಗೆ ತಿಳಿದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಕುರಿಗಾಹಿ ಕುಟುಂಬಗಳಿಗೆ ಆಗುತ್ತಿರುವ ಸಮಸ್ಯೆ ತಪ್ಪಿಸಿ ರಕ್ಷಣೆ ಒದಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ. ಕುರಿಗಾಹಿಗಳಿರುವ ಏಳು ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಮಾತನಾಡಿ ರಕ್ಷಣೆಗೆ ಧಾವಿಸುವಂತೆ ಸೂಚಿಸಿದ್ದಾರೆ.

ಜಿಲ್ಲೆಯಲ್ಲಿ ಸಾವಿರಾರು ಜನರು ಕುರಿ, ಮೇಕೆ ಸಾಕಣೆಯಲ್ಲಿ ತೊಡಗಿದ್ದಾರೆ. ಕುರಿ ಸೇರಿ ಸಾಕುಪ್ರಾಣಿಗಳಿಂದ ಕರೊನಾ ಹರಡುತ್ತದೆ ಎಂಬ ಬಗ್ಗೆ ಯಾವುದೇ ವರದಿ ಇಲ್ಲ. ಕುರಿಗಾಹಿಗಳಿಗೆ ಸಮಸ್ಯೆಯಾದರೆ ನೇರವಾಗಿ ನನ್ನನ್ನು ಸಂಪರ್ಕಿಸಿ ಪರಿಹಾರ ಪಡೆಯಬಹುದು. ಇಲ್ಲಿಯವರೆಗೂ ಯಾರೂ ದೂರು ನೀಡಿಲ್ಲ. ಡಾ.ಕೆ.ರಾಕೇಶ್‌ಕುಮಾರ್ ಜಿಲ್ಲಾಧಿಕಾರಿ, ತುಮಕೂರು ಹೊರ ಪ್ರದೇಶದಿಂದ ಬಂದಿರುವ ನಮ್ಮಿಂದ ಕರೊನಾ ರೋಗ ಬರುತ್ತದೆ ಎಂದು ಸ್ಥಳೀಯರ ಗಲಾಟೆ ನಿರಂತರವಾಗಿ ನಡೆಯುತ್ತಿದೆ, ಇಲ್ಲಿನ ಸಹವಾಸವೇ ಸಾಕು, ನಮ್ಮೂರಿಗೆ ನಾವು ಹೋಗಲು ರೆಡಿಯಾಗಿದ್ದರೂ ನಾವು ಕದಲಲು ಪೊಲೀಸರು ಬಿಡುತ್ತಿಲ್ಲ, ನಮಗೆಲ್ಲ ಪ್ರಾಣಭಯ ಕಾಡಲಾರಂಭಿಸಿದೆ. ಹೊರಳಪ್ಪ ಪಟ್ಟನಾಯಕನಹಳ್ಳಿ ಗೊಲ್ಲರಹಟ್ಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net