

ಹನೂರು: ಪಟ್ಟಣದ ಆಂಜನೇಯ ಬಡಾವಣೆಯಲ್ಲಿ ಬುಧವಾರ ನಾಯಿಗಳ ದಾಳಿಗೆ ಮೂರು ಕುರಿಗಳು ಮೃತಪಟ್ಟಿವೆ.
ಬಡಾವಣೆ ನಿವಾಸಿ ಹೇಮಾವತಿ ಎಂಬುವರು ಮನೆಯ ಸಮೀಪದಲ್ಲಿನ ಕೊಟ್ಟಿಗೆಯಲ್ಲಿ ಕುರಿಗಳನ್ನು ಕಟ್ಟಿ ಹಾಕಿದ್ದರು. ಬುಧವಾರ ಮುಂಜಾನೆ 3.30ರ ಸಮಯದಲ್ಲಿ ಸುಮಾರು 9 ನಾಯಿಗಳು ಕೊಟ್ಟಿಗೆಗೆ ಲಗ್ಗೆಯಿಟ್ಟು ಕುರಿಗಳ ಮೇಲೆ ದಾಳಿ ಮಾಡುತ್ತಿದ್ದವು ಎನ್ನಲಾಗಿದೆ.
ಕುರಿಗಳು ಕಿರುಚಿಕೊಳ್ಳುವ ಶಬ್ಧದಿಂದ ಮನೆಯವರು ಹೊರಗೆ ಬಂದಿದ್ದು, ನಾಯಿಗಳನ್ನು ಹೊರಗಟ್ಟಿದ್ದಾರೆ. ಘಟನೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟಿವೆ.
ಕುರಿಗಳ ಸಾವಿನಿಂದ ನಷ್ಟವಾಗಿದೆ. ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವಂತೆ ಕುಟುಂದವರು ವಿಜಯವಾಣಿ ಬಳಿ ಅಳಲು ತೋಡಿಕೊಂಡರು.
ನಾಯಿಗಳ ದಾಳಿಯಿಂದ ಕುರಿಗಳು ಮೃತಪಟ್ಟಿರುವ ಬಗ್ಗೆ ಗಮನಕ್ಕೆ ಬಂದಿಲ್ಲ. ಫೆ.27ರಂದು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಸ್ಥಳೀಯರಿಂದ ಮಾಹಿತಿ ಪಡೆದು ಅಗತ್ಯ ಕ್ರಮವಹಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮೂರ್ತಿ ವಿಜಯವಾಣಿಗೆ ತಿಳಿಸಿದರು.