

ನರಗುಂದ: ಹೆತ್ತವರ ಮನವೊಲಿಸಿ ಸಣ್ಣ ವಯಸ್ಸಿನಲ್ಲೇ ಮದುವೆ ಬಂಧನದಿಂದ ಪಾರಾಗಿದ್ದ ಹಳ್ಳಿ ಯುವತಿಯೊಬ್ಬಳು ಈಗ ತನ್ನದೇ ಕಥೆ ಮೂಲಕ ವಿಶ್ವದ ಗಮನ ಸೆಳೆದಿದ್ದಾಳೆ! ಗದಗ ಜಿಲ್ಲೆಯ ನರಗುಂದ ತಾಲೂಕಿನ ಕುರುಗೋವಿನಕೊಪ್ಪ ಗ್ರಾಮದ ಅಶ್ವಿನಿ ದೊಡ್ಡಲಿಂಗಪ್ಪನವರ (24) ಈ ಸಾಹಸಿ ಯುವತಿ. ಅಮೆರಿಕದ ಲೆನೋವೊ ಕಂಪನಿ ಆಯೋಜಿಸಿದ್ದ ನ್ಯೂ ರಿಯಾಲಿಟಿ ಲೈಫ್ ಸ್ಟೋರಿ ಸ್ಪರ್ಧೆಗೆ ಈಕೆಯ ಕಥೆ ಆಯ್ಕೆ ಆಗಿದೆ. ಒಟ್ಟಾರೆ ವಿಶ್ವದ 10 ದೇಶಗಳಿಂದ ತಲಾ ಒಬ್ಬರು ಸ್ಪರ್ಧೆಗೆ ಆಯ್ಕೆ ಯಾಗಿದ್ದಾರೆ. ಅಶ್ವಿನಿಯದು ರೈತಾಪಿ ಕುಟುಂಬ. ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಪೂರೈಸಿದ್ದ ಈಕೆ ನರಗುಂದದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ, ಬಿಎ ಪದವಿ ಮುಗಿಸಿ ಉನ್ನತ ವ್ಯಾಸಂಗದ ಗುರಿ ಹೊಂದಿದ್ದರು. ಆದರೆ, ಆಕೆಯ ಹೆತ್ತವರು ಮದುವೆಗೆ ಸಜ್ಜಾಗಿದ್ದರು. ಕೊನೆಗೂ ಮನವಲಿಸಿದ ಆಕೆ ವಿದ್ಯಾಭ್ಯಾಸ ಮುಗಿಸಿ ಗುರಿ ಮುಟ್ಟಿದ್ದಾರೆ.
ಮೊದ ಮೊದಲು ಇಂಗ್ಲಿಷ್ ಭಾಷೆ, ಭಾಷಣ, ವೇದಿಕೆ ಅಂದರೆ ಭಯ ಪಡುತ್ತಿದ್ದ ಅಶ್ವಿನಿ ಈಗ ಶಿಕ್ಷಕರಿಗೆ ತರಬೇತಿ ನೀಡುವ ಮಟ್ಟಕ್ಕೆ ಬೆಳೆದಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಲಭ್ಯ ತಂತ್ರಜ್ಞಾನ ಬಳಸಿಕೊಂಡು ಮಕ್ಕಳಿಗೆ ಯಾವ ರೀತಿ ಪಾಠ ಹೇಳಿಕೊಡಬೇಕು. ಉತ್ತಮ ತರಗತಿ ನಿರ್ವಿುಸುವುದು, ನಿರ್ವಹಿಸುವುದು ಹೇಗೆಂದು ಹೇಳಿ ಕೊಡುತ್ತಿದ್ದಾರೆ. ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್ನಲ್ಲಿ 2 ತಿಂಗಳು ಸ್ಕಿಲ್ ಡೆವಲಪ್ವೆುಂಟ್ ಕೋರ್ಸ್ ಮುಗಿಸಿದ್ದಾರೆ. ಬಳಿಕ 2018ರಲ್ಲಿ ಮೇಘಶಾಲಾ ಸಂಸ್ಥೆಗೆ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ವಿವಿಧ ಶಾಲೆಗಳಿಗೆ ತೆರಳಿ, ತಂತ್ರಜ್ಞಾನ ಬಳಸಿಕೊಂಡು ವಿದ್ಯಾರ್ಥಿಗಳ ಮನಮುಟ್ಟುವಂತೆ ಶಿಕ್ಷಕರು ಹೇಗೆ ಪಾಠ ಮಾಡಬೇಕು ಎಂಬುದರ ಕುರಿತು ತರಬೇತಿ ನೀಡುತ್ತಿದ್ದಾರೆ. ಇದನ್ನೂ ಓದಿ: ಕರೊನಾ ಸೋಂಕು; ಎರಡು ತಿಂಗಳಲ್ಲೇ ಅತಿ ಕಡಿಮೆ, ಸೋಂಕಿನ ಪ್ರಮಾಣದಲ್ಲೂ ನಿರಂತರ ಇಳಿಕೆ..
ಕಥೆಯಲ್ಲ ಜೀವನ: ಅಮೆರಿಕದ ಲೆನೊವೊ ಕಂಪನಿ ಆಯೋಜಿಸಿದ್ದ ನ್ಯೂ ರಿಯಾಲಿಟಿ ಲೈಫ್ ಸ್ಟೋರಿ ಸ್ಪರ್ಧೆಗೆ ಅಶ್ವಿನಿ ತನ್ನ ಕಥೆ ಕಳಿಸಿದ್ದರು. ಗ್ರಾಮೀಣ ಪ್ರದೇಶದ ಹೆಣ್ಣು ಮಗಳಾಗಿ ಗುಣಮಟ್ಟದ ಶಿಕ್ಷಣ ಪಡೆಯಲು ಎದುರಿಸಿದ ಕಷ್ಟ, ಬೆಳೆದು ಬಂದ ರೀತಿಯ ಬಗ್ಗೆ ತನ್ನದೇ ನಿಜ ಜೀವನದ ಕಥೆಯನ್ನು ಈಕೆ ಚಿತ್ರೀಕರಿಸಿದ್ದರು. ಅ.8ರಂದು ನಡೆದ ಲೆನೊವೊ ಲೈವ್ ಶೋನಲ್ಲಿ ತನ್ನ ಕಥೆ ಹೇಳಿ ಇಡೀ ಜಗತ್ತು ತನ್ನತ್ತ ಸೆಳೆಯುವಂತೆ ಮಾಡಿದ್ದಾರೆ. ಕೇವಲ ಐದು ದಿನಗಳಲ್ಲಿ ಅಶ್ವಿನಿಯ ಸ್ಟೋರಿಯನ್ನು ಯುಟ್ಯೂಬ್ನಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಮೀಣ ಪ್ರದೇಶದ ಬಹುತೇಕ ಜನರು ಇಂದಿಗೂ ತಮ್ಮ ಹೆಣ್ಣು ಮಕ್ಕಳನ್ನು ಉನ್ನತ ವ್ಯಾಸಂಗಕ್ಕೆ ಕಳಿಸುತ್ತಿಲ್ಲ. ನನಗೂ ಕೂಡ ಈ ಅನುಭವವಾಗಿದೆ. ಮದುವೆ ಬದಲು ಮಕ್ಕಳಿಗೆ ಓದಲು, ಪ್ರತಿಭೆಯನ್ನು ಹೊರಹಾಕಲು ಪಾಲಕರು ಅವಕಾಶ ಮಾಡಿಕೊಡಬೇಕು.
| ಅಶ್ವಿನಿ ದೊಡ್ಡಲಿಂಗಪ್ಪನವರ