ವಿಪತ್ತು ನಿರ್ವಹಣೆಗೆ ಶೌರ್ಯ ತಂಡ

SKDRDP
Published on

ಬೆಳ್ತಂಗಡಿ: ರಾಜ್ಯದ ಬಹುತೇಕ ಕಡೆ ಭಾರಿ ಮಳೆಯಾಗುತ್ತಿದ್ದು, ಕಡಲ್ಕೊರೆತ, ಅತಿವೃಷ್ಟಿ, ಗುಡ್ಡ ಕುಸಿತ, ರಸ್ತೆ ಸಂಪರ್ಕ ಕಡಿತ, ಕಾಲುಸಂಕ, ಸೇತುವೆಗಳ ಹಾನಿ, ಜನಸಂಪರ್ಕ ಕಡಿತ, ಮನೆ ಹಾನಿ, ಕೃಷಿ, ಬೆಳೆ ಹಾನಿ, ಸಂಭವಿಸಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಶೌರ್ಯ ತಂಡಗಳು ಆಯಾ ಪ್ರದೇಶದಲ್ಲಿ ಅವಿರತ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಸ್ವಪ್ರೇರಣೆಯಿಂದ ಕಾರ್ಯಪ್ರವೃತ್ತವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ತಿಳಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪೂರ್ವಯೋಚಿತವಾಗಿ ವಿಪತ್ತು ನಿರ್ವಹಣೆಗೆಂದೇ ರಾಜ್ಯದ 53 ತಾಲೂಕುಗಳಲ್ಲಿ ಪ್ರಾರಂಭಿಸಿದ ಶೌರ್ಯ ತಂಡದಲ್ಲಿ 8640 ಸ್ವಯಂಸೇವಕರು ತುರ್ತು ಸೇವೆ ನೀಡುತ್ತಿದ್ದಾರೆ. ಅನೇಕ ಸಂಭವನೀಯ ವಿಪತ್ತುಗಳನ್ನು ತಪ್ಪಿಸುವಲ್ಲಿ ಹಾಗೂ ಪ್ರವಾಹದ ಸಮಯದಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಪೊಲಿಸ್ ಇಲಾಖೆ, ಸ್ಥಳೀಯರೊಂದಿಗೆ ಸಹಭಾಗಿಯಾಗಿ ಕಾರ್ಯಾಚರಿಸುತ್ತಿದೆ.

ಪ್ರಾಕೃತಿಕ ವಿಕೋಪಕ್ಕೆ ಸ್ಪಂದನೆ: ಈ ವರ್ಷದ ಮಳೆಗಾಲದಲ್ಲಿ ಪ್ರಮುಖವಾಗಿ ಕೊಡಗು, ಬೆಳಗಾವಿ, ಬಾಗಲಕೋಟೆ, ಉತ್ತರಕನ್ನಡ ಜಿಲ್ಲೆಯ ಭಟ್ಕಳ, ಮುರುಡೇಶ್ವರ, ಶಿರಾಲಿ, ಬಸ್ತಿಗ್ರಾಮ, ಮಾವಿನಕುರುವೆ, ಬಂದಾರು, ಬೆಂಗ್ರೆ, ಬೆಳಕೆ, ದ.ಕ. ಜಿಲ್ಲೆಯ ಸುಳ್ಯ, ಕೊಲ್ಲಮೊಗ್ರು, ಹರಿಹರ, ಪಲ್ಲತಡ್ಕ, ಬಾಳುಗೋಡು, ಕಲ್ಲುಗುಂಡಿ, ಸಂಪಾಜೆ, ಅರಂತೋಡು, ನಡುಗಲ್ಲು, ಕಲ್ಮಕಾರು, ಪೆರಾಜೆ, ಕೊನಾಡು, ಸುಬ್ರಹ್ಮಣ್ಯ ಮುಂತಾದ ಪ್ರದೇಶಗಳಲ್ಲಿರುವ ಸ್ವಯಂಸೇವಕರು ಪ್ರವಾಹ ಪೀಡಿತರ ನೆರವಿಗೆ ಧಾವಿಸಿ ಜಾನುವಾರುಗಳು ಮತ್ತು ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸುವಲ್ಲಿ ನೆರವಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ, ನೀರಿನ ರಭಸಕ್ಕೆ ಕೊಚ್ಚಿಕೊಂಡು ಬಂದು ಎಲ್ಲೆಂದರಲ್ಲಿ ಸಿಲುಕಿದ್ದ ಮರಮಟ್ಟುಗಳನ್ನು ತೆರವುಗೊಳಿಸುವಲ್ಲಿ, ರಸ್ತೆ ಸಂಪರ್ಕ ಮರು ನಿರ್ಮಿಸುವಲ್ಲಿ, ಮರಣ ಹೊಂದಿದ ಪ್ರಾಣಿಗಳನ್ನು ದಫನ ಮಾಡುವಲ್ಲಿ, ನೀರು ತುಂಬಿದ ಮನೆಗಳಲ್ಲಿ ಸ್ವಚ್ಛತೆ, ಮನೆ, ರಸ್ತೆ ರಿಪೇರಿ, ಕಾಲುಸಂಕ ರಚನೆ ಮತ್ತಿತರ ತುರ್ತು ಅಗತ್ಯಗಳನ್ನು ಗಮನಿಸಿ ನೆರವಿಗೆ ಧಾವಿಸಿ ಸಹಕರಿಸಿದ್ದಾರೆ.

ರಕ್ಷಣಾ ಪರಿಕರಗಳ ಒದಗಣೆ: ವಿಪತ್ತು ನಿರ್ವಹಣಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅನುಕೂಲವಾಗುವಂತೆ ಪ್ರತಿ ತಾಲೂಕು ವಿಪತ್ತು ನಿರ್ವಹಣಾ ಘಟಕಗಳಿಗೆ ಸುಮಾರು ಎರಡು ಲಕ್ಷ ರೂ. ಮೌಲ್ಯದ ವಿಪತ್ತು ನಿರ್ವಹಣಾ ಪರಿಕರಗಳನ್ನು ಒದಗಿಸಲಾಗಿದೆ. ಈ ಸ್ವಯಂಸೇವಕರು ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳದವರಿಂದ ತರಬೇತಿ ಪಡೆದಿರುವುದಲ್ಲದೆ ಸಂಪನ್ಮೂಲ ಪರಿಣತರಿಂದ ಜೀವರಕ್ಷಣಾ ಕೌಶಲಗಳನ್ನೂ ತಿಳಿಸಿಕೊಡಲಾಗಿದೆ.

ಪ್ರಸಕ್ತ ವರ್ಷದ ಕಾರ್ಯಾಚರಣೆ: ಜನ ಮತ್ತು ಜಾನುವಾರುಗಳ ಸ್ಥಳಾಂತರ 63, ಗುಡ್ಡ ಕುಸಿತ ಸ್ಥಳಗಳಲ್ಲಿ ನೆರವು 28, ಹಾನಿಗೊಂಡ ಮನೆಗಳ ಸ್ವಚ್ಚತಾ ಕಾರ್ಯ 261, ಕಿಂಡಿ ಅಣೆಕಟ್ಟು ಮತ್ತು ಸೇತುವೆಗಳ ಸ್ವಚ್ಛತೆ 347, ರಸ್ತೆಯಲ್ಲಿ ಬಿದ್ದಿರುವ ಮರಗಳ ತೆರವು 684, ವಿದ್ಯುತ್ ಅಡಚಣೆಗೆ ಇಲಾಖೆಯೊಂದಿಗೆ ಸಹಕಾರ 134, ತಾತ್ಕಾಲಿಕ ಮನೆ ರಿಪೇರಿ 136, ಕಾಲುಸಂಕ ರಚನೆ 24, ರಸ್ತೆ ರಿಪೇರಿ ಮತ್ತು ನಿರ್ಮಾಣಕ್ಕೆ ಶ್ರಮದಾನ 218, ಸತ್ತ ಪ್ರಾಣಿಗಳ ತೆರವು ಮತ್ತು ದಫನ 55, ಕುಡಿಯುವ ನೀರಿನ ಬಾವಿ ಸ್ವಚ್ಛತೆ 6, ಉರಗ ಕಾರ್ಯಾಚರಣೆ 183, ಬೆಳೆ ಹಾನಿಯಾದ ರೈತರೊಂದಿಗೆ ಸಹಕಾರ 78, ಅನಾರೋಗ್ಯ ಪೀಡಿತರಿಗೆ ಸೇವೆ 41 ಮೊದಲಾದ ನಿರ್ವಹಣಾ ಕಾರ್ಯಾಚರಣೆಗಳನ್ನು ಕೈಗೊಂಡಿದ್ದಾರೆ.

ಸಹಾಯವಾಣಿ: ದ.ಕ., ಉಡುಪಿ, ಉತ್ತರಕನ್ನಡ, ಶಿರಸಿ, ಕೊಡಗು 9901321186, ಧಾರವಾಡ, ಹಾವೇರಿ, ಬೆಳಗಾವಿ, ಗೋಕಾಕ್, ಚಿಕ್ಕೋಡಿ 8277237882, ಕೊಪ್ಪಳ, ಗದಗ, ಬಳ್ಳಾರಿ, ಹೊಸಪೇಟೆ, ರಾಯಚೂರು, ಬಾಗಲಕೋಟೆ 7899692619, ಚಿತ್ರದುರ್ಗ, ಜಗಳೂರು, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ 8971079892, ಹಾಸನ 9449903757, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು 9449365931, ಇತರ ಜಿಲ್ಲೆಗಳು 9686527633 ಜಿಲ್ಲೆಗಳಲ್ಲಿ ವಿಪತ್ತು ಸಂಭವಿಸಿದಾಗ ನೆರವಾಗಲು ಈ ಕೆಳಗಿನ ದೂರವಾಣಿಗಳನ್ನು ಸಂಪರ್ಕಿಸಬಹುದು.

ಡಾ.ವೀರೇಂದ್ರ ಹೆಗ್ಗಡೆ ಶ್ಲಾಘನೆ

ತುರ್ತು ಸೇವೆಗೆ ಶೌರ್ಯ ತಂಡ ಸಿದ್ಧವಾಗಿದ್ದು, ಸೇವೆ ಮಾಡುವುದು ಮನುಷ್ಯನ ಸಹಜ ಪ್ರವೃತ್ತಿ. ಅದನ್ನು ಸ್ವಾಭಾವಿಕವಾಗಿ ಮಾಡಬೇಕಾದರೆ ಪ್ರೇರಣೆ ಬೇಕು. ಇಂಥ ಪ್ರೇರಣೆ ಕ್ಷೇತ್ರದ ಮೂಲಕ ಶೌರ್ಯ ಸ್ವಯಂಸೇವಕರಿಗೆ ನೀಡಲಾಗುತ್ತಿದೆ. ಆಪತ್ತಿನಲ್ಲಿರುವಾಗ ಸೇವೆ ಮಾಡುವುದು ಮನುಷ್ಯತ್ವದ ಹಾಗೂ ಧರ್ಮದ ಪ್ರತೀಕ. ಶೌರ್ಯ ತಂಡದವರು ಇದನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಾರ್ಷಿಕ ಒಂದು ಕೋಟಿ ರೂ. ಅನುದಾನ

ವಾರ್ಷಿಕವಾಗಿ ಒಂದು ಕೋಟಿ ರೂ. ಮೀಸಲಿಟ್ಟಿದ್ದು, ಕಾರ್ಯಾಚರಣೆ ಸಂದರ್ಭ ಬರುವ ಖರ್ಚುಗಳನ್ನು ಇದರಿಂದ ನಿಭಾಯಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ 21,600 ವಿಪತ್ತು ನಿರ್ವಹಣಾ ಚಟುವಟಿಕೆಗಳು ಹಾಗೂ 12,300 ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಮಾಡುತ್ತ ಸಮುದಾಯದ ಆಪತ್ಬಾಂಧವರಾಗಿ ಶೌರ್ಯ ತಂಡದ ಸ್ವಯಂಸೇವಕರು ತೊಡಗಿಸಿಕೊಂಡಿದ್ದಾರೆ. ಈ ಕಾರ್ಯಕ್ರಮ ಇನ್ನಷ್ಟು ವಿಸ್ತರಿಸಿ ರಾಜ್ಯಾದ್ಯಂತ 20 ಸಾವಿರ ಸ್ವಯಂಸೇವಕರನ್ನು ತರಬೇತಿಗೊಳಿಸುವ ಗುರಿ ಹೊಂದಲಾಗಿದೆ. ಶೌರ್ಯ ತಂಡದ ಸ್ವಯಂಸೇವಕರ ಉತ್ಸಾಹ ಮತ್ತು ಪ್ರಯತ್ನಕ್ಕೆ ಸ್ಥಳೀಯ ಜಿಲ್ಲಾಡಳಿತಗಳು ಪ್ರಶಂಸೆ ವ್ಯಕ್ತಪಡಿಸಿವೆ ಎಂದು ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಸ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net