ಹಿಂದೂಗಳು ರಾಜಕೀಯಪ್ರಜ್ಞೆ ಬೆಳೆಸಿಕೊಳ್ಳಲು ಪೇಜಾವರ ಶ್ರೀ ಕರೆ

udp-10-hindu 1
Published on

ಉಡುಪಿ: ಒಳ್ಳೆಯ ವಿಚಾರಗಳು ಹರಿದು ಬರಲಿ, ಹೃದಯ ತೆರೆದಿದೆ. ಆದರೆ, ಅದೇ ಹೃದಯದೊಳಗೆ ದುರ್ವಿಚಾರ ನುಸುಳಿದರೆ ಎದೆಯೊಡ್ಡಿ ನಿಲ್ಲುವವರು ನಾವು. ಇಂಥ ಸಂದರ್ಭ ಬಂದೊದಗಿದೆ. ಧರ್ಮ ರಕ್ಷಣೆಗಾಗಿ ಎದೆಯೊಡ್ಡಿ ಹಿಂದೂಗಳು ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಲು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕರೆ ನೀಡಿದರು.

ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ಮಂಗಳವಾರ ವಿಶ್ವ ಹಿಂದು ಪರಿಷತ್​, ಬಜರಂಗದಳ ಆಯೋಜಿಸಿದ್ದ ಶೌರ್ಯ ಜಾಗರಣಾ ರಥಯಾತ್ರೆ ಸಮಾರೋಪ ಹಾಗೂ ಹಿಂದು ಸಮಾಜೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಸನಾತನ ಹಿಂದು ಧರ್ಮ ತಲೆ ಎತ್ತಿ ನಡೆಯುತ್ತಿದೆ ಎಂದರೆ ಅದಕ್ಕೆ ವಿಶ್ವ ಹಿಂದು ಪರಿಷತ್​ ಕಾರಣ. ಸನಾತನ ಧರ್ಮವನ್ನು ವಿದೇಶೀಯರೂ ಒಪ್ಪಿ, ಅಪ್ಪಿಕೊಳ್ಳುತ್ತಿದ್ದಾರೆ. ಆದರೆ, ಈ ದೇಶದ ಗಾಳಿ, ನೀರು, ಅನ್ನ ಸೇವಿಸಿದ ಕೆಲವರು ಸನಾತನ ಧರ್ಮವನ್ನು ಕಿತ್ತೊಗೆಯುತ್ತೇವೆ ಎನ್ನುತ್ತಾರೆ. ಅದು ಅಸಾಧ್ಯ. ದೇಶ, ಸಂಸತಿ, ಸನಾತನ ಧರ್ಮ, ಹಿಂದುತ್ವವನ್ನು ಎತ್ತಿ ಹಿಡಿಯುವ ಸರ್ಕಾರವನ್ನು ನಾವೆಲ್ಲ ಆರಿಸಿ ತರಬೇಕು ಎಂದು ಹೇಳಿದರು.

ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ, ಮಧ್ಯಪ್ರದೇಶ ಭೋಪಾಲದ ಮಹಾಮಂಡಲೇಶ್ವರ ಅಖಿಲೇಶ್ವರಾನಂದ ಗಿರಿ ಮಹಾರಾಜ ಮಾತನಾಡಿದರು. ವಿಎಚ್​ಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್​ ಮೆಂಡನ್​ ಮಾತನಾಡಿ, ಈ ದೇಶ, ಸಮಾಜ, ಹಿಂದುತ್ವಕ್ಕಾಗಿ ಶೌರ್ಯ ಮೆರೆದ, ಪ್ರಾಣ ತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸುವುದು ಹಾಗೂ ಯುವ ಸಮುದಾಯದಲ್ಲಿ ಹಿಂದುತ್ವದ ಕುರಿತು ಜಾಗೃತಿ ಮೂಡಿಸುವುದು ಸಮಾಜೋತ್ಸವದ ಉದ್ದೇಶ. ಉಡುಪಿಯಲ್ಲಿ ಮಹಿಷ ದಸರಾ ಆಯೋಜಿಸಲು ಮುಂದಾಗಿದ್ದಾರೆ. ಇಲ್ಲಿ ಧರ್ಮ ವಿರೋಧಿ ಆಚರಣೆಯನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದರು.

ಉಡುಪಿ ಸಾಯಿರಾಧಾ ಗ್ರೂಪ್ಸ್​ನ ಮನೋಹರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆರೆಸ್ಸೆಸ್​ ಪ್ರಾಂತ ಸಹ ಕಾರ್ಯವಾಹ ಪಿ.ಎಸ್​.ಪ್ರಕಾಶ್​, ಪುಣೆ ಬಂಟ್ಸ್​ ಅಸೋಸಿಯೇಷನ್​ ಅಧ್ಯಕ್ಷ ಗಣೇಶ ಹೆಗಡೆ ಪಣ್ಚೂರು ಬೆಳ್ಳಂಪಳ್ಳಿ, ಉದ್ಯಮಿ ಹರಿಯಪ್ಪ ಕೋಟ್ಯಾನ್​, ಕರ್ನಾಟಕ ಫೆಡರೇಷನ್​ ಆಫ್​ ಕರ್ನಾಟಕ ಕ್ವಾರಿ ಸ್ಟೋನ್​ ಕ್ರಷರ್​ ಓನರ್ಸ್​ ಅಸೋಸಿಯೇಷನ್​ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ, ಉದ್ಯಮಿ ರಮೇಶ ಬಂಗೇರ, ವಿಎಚ್​ಪಿ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಡಾ.ಎಂ.ಬಿ.ಪುರಾಣಿಕ್​, ಬಜರಂಗದಳ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ, ದಕ್ಷಿಣ ಪ್ರಾಂತ ಸಂಯೋಜಕ ಸುನೀಲ್​ ಕೆ.ಆರ್​., ಸಾಮಾಜಿಕ ಮುಖಂಡ ಕಡ್ತಲ ವಿಶ್ವನಾಥ ಪೂಜಾರಿ, ವಿಎಚ್​ಪಿ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ ಮೊದಲಾದವರು ಭಾಗವಹಿಸಿದ್ದರು.
ಬಜರಂಗದಳ ಜಿಲ್ಲಾ ಸಂಯೋಜಕ ಚೇತನ ಪೆರಾಲ್ಕೆ ಸ್ವಾಗತಿಸಿದರು. ಭಾಗ್ಯಶ್ರೀ ಐತಾಳ್​ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಮಾತೃಶಕ್ತಿ ಪ್ರಮುಖ್​ ಪೂರ್ಣಿಮಾ ಸುರೇಶ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net