ವಿಎಚ್‌ಪಿಯಿಂದ ಶೌರ್ಯ ಜಾಗರಣ ರಥಯಾತ್ರೆ

CTD 16 VHP RATA
Published on

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ವಿಶ್ವ ಹಿಂದು ಪರಿಷತ್(ವಿಎಚ್‌ಪಿ) 60 ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಬಜರಂಗದಳ ದೇಶದಾದ್ಯಂತ ಸೆ.25 ರಿಂದ ಅಕ್ಟೋಬರ್10 ರವರೆಗೆ ಶೌರ್ಯ ಜಾಗರಣ ರಥಯಾತ್ರೆ ಆಯೋಜಿಸಿದೆ.

ಯಾತ್ರೆಗೆಂದೇ ನೂರಕ್ಕೂ ಹೆಚ್ಚು ವಾಹನಗಳನ್ನು ವಿಶೇಷ ಅಲಂಕಾರಗಳೊಂದಿಗೆ ಸಿದ್ಧಪಡಿಸಲಾಗುತ್ತಿದೆ. ದೇಶದ ಎಲ್ಲ ರಾಜ್ಯಗಳ, ಪರಿ ಷತ್‌ನ 44 ಪ್ರಾಂತ್ಯಗಳಲ್ಲೂ ಏಕಕಾಲಕ್ಕೆ ಆರಂಭವಾಗುವ ಯಾತ್ರೆ ಆಯಾ ಪ್ರಾಂತ್ಯಗಳ ವ್ಯಾಪ್ತಿಯ ನಿಗದಿತ ಸ್ಥಳಗಳಲ್ಲಿ ಏಕಕಾಲಕ್ಕೆ ಸಂಪನ್ನಗೊಳ್ಳಲಿದೆ. ಯಾತ್ರೆ ಸಾಗುವ ಜಿಲ್ಲೆ, ತಾಲೂಕು ಕೇಂದ್ರಗಳು ಮತ್ತಿತರ ಸ್ಥಳಗಳಲ್ಲಿ ಏರ್ಪಡಿಸುವ ಸಾರ್ವಜನಿಕ ಸಭೆಗಳಲ್ಲಿ ಸಾಧು, ಸಂತರು, ವಿಎಚ್‌ಪಿ ಹಾಗೂ ಬಜರಂಗಳ ದಳದ ಕೇಂದ್ರ, ರಾಜ್ಯ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

ಸಾವಿರಾರು ವರ್ಷಗಳಿಂದಲೂ ದೇಶ ಪರಕೀಯರ ದಾಳಿಗಳನ್ನು ಶೌರ್ಯ, ಪರಾಕ್ರಮಗಳ ಮೂಲಕ ದಿಟ್ಟತನದಿಂದ ಸಮರ್ಪಕವಾಗಿ ಎದುರಿಸಿದೆ. ಸನಾತನ ಧರ್ಮ, ಪವಿತ್ರ ಭರತಭೂಮಿಯ ಸಂರಕ್ಷಣೆಗೆ ಅನೇಕ ವೀರರ ಬಲಿದಾನವಾಗಿದೆ. ಅವರೆಲ್ಲರ ತ್ಯಾಗ, ಬಲಿದಾನಗಳಿಂದಾಗಿ ಸನಾತನಧರ್ಮ ಸುರಕ್ಷಿತವಾಗಿ ಇಲ್ಲಿಯವರೆಗೂ ತಲುಪಿದ್ದು, ಇದನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆ ಪ್ರತಿ ಹಿಂದುವಿನ ಮೇಲಿದೆ. ಈ ಹಿನ್ನೆಲೆಯಲ್ಲಿ ಈ ಕಾರ‌್ಯಕ್ರಮ ರೂಪಿಸಲಾಗಿದೆ. ಲವ್‌ಜಿಹಾದ್, ಮತಾಂತರ ವಿರುದ್ಧವೂ ಸಮಾಜದಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ವಿಎಚ್‌ಪಿ ಪ್ರಮುಖರೊಬ್ಬರು ತಿಳಿಸಿದ್ದಾರೆ.

ವಿಎಚ್‌ಪಿಯ ಕರ್ನಾಟಕದ ದಕ್ಷಿಣ ಮತ್ತು ಉತ್ತರ ಪ್ರಾಂತ್ಯದ ಜಿಲ್ಲೆಗಳಲ್ಲೂ ನಿಗದಿತ ಅವಧಿಯಲ್ಲಿ ಯಾತ್ರೆ ನಡೆಯಲಿದೆ. ದಕ್ಷಿಣ ಪ್ರಾಂತ್ಯ ಜಿಲ್ಲೆಗಳಲ್ಲಿ ನಡೆಯುವ ಈ ಯಾತ್ರೆ ಚಿತ್ರದುರ್ಗದಿಂದ ಆರಂಭವಾಗಿ, ಉಡುಪಿಯಲ್ಲಿ ಸಂಪನ್ನವಾಗಲಿದೆ. ಉತ್ತರ ಪ್ರಾಂತ್ಯದ ಜಿಲ್ಲೆಗಳಲ್ಲಿ ಏಳು ಕಡೆ ಪ್ರತ್ಯೇಕವಾಗಿ ಪ್ರಾರಂಭವಾಗಲಿದೆ.

ಎಲ್ಲಿಂದ ಆರಂಭ, ಎಲ್ಲಿ ಸಂಪನ್ನ?: ರಾಜ್ಯದಲ್ಲಿ ವಿಎಚ್‌ಪಿ ದಕ್ಷಿಣ ಪ್ರಾಂತ್ಯದ ರಥ ಯಾತ್ರೆ ಚಿತ್ರದುರ್ಗದಿಂದ ಆರಂಭವಾಗಲಿದೆ. ದಾವಣಗೆರೆ, ಸಾಗರ, ಶಿವಮೊಗ್ಗ, ಶೃಂ ಗೇರಿ, ಚಿಕ್ಕಮಗಳೂರು, ಹಾಸನ, ಅರಸೀಕೆರೆ, ತಿಪಟೂರು, ತುಮಕೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ,ಬೆಂಗಳೂರು, ಕೋಲಾರ, ಮಂಡ್ಯ, ಚಾಮರಾಜನಗರ, ಮೈಸೂರು, ಕುಶಾಲನಗರ, ಮಡಿಕೇರಿ, ಸುಳ್ಯ, ಕುಕ್ಕೆಸುಬ್ರಮಣ್ಯ, ಪುತ್ತೂರು ಮಾರ್ಗವಾಗಿ ಉಡುಪಿ ತಲುಪಿ, ಅಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ.

ಉತ್ತರ ಪ್ರಾಂತ್ಯಕ್ಕೆ ಸಂಬಂಧಿಸಿದಂತೆ, ವಿಜಯಪುರ-ಬಾಗಲಕೋಟೆ ಜಿಲ್ಲೆಗಳಲ್ಲಿ ಸಂಚರಿಸುವ ಯಾತ್ರೆ ಬಾಗಲಕೋಟೆಯಿಂದ ಪ್ರಾರಂಭವಾಗಿ ವಿಜಯಪುರದಲ್ಲಿ ಸಂಪನ್ನಗೊಳ್ಳಲಿದೆ. ಚಿಕ್ಕೋಡಿ-ಬೆಳಗಾವಿಯಲ್ಲಿ ಸಂಚರಿಸುವ ಈ ಯಾತ್ರೆ ಚಿಕ್ಕೋಡಿಯಿಂದ ಆರಂಭವಾಗಿ ಬೆಳಗಾವಿ. ಧಾರವಾಡ-ಹುಬ್ಬಳ್ಳಿಯಲ್ಲಿ ನಡೆಯುವ ಯಾತ್ರೆ ಹುಬ್ಬಳ್ಳಿಯಲ್ಲಿ ಪ್ರಾರಂಭವಾಗಿ ಹುಬ್ಬಳ್ಳಿಯಲ್ಲಿ. ಗದಗ-ಹಾವೇರಿಯಲ್ಲಿ ಯಾತ್ರೆ ಹಾವೇರಿಯಿಂದ ಆರಂಭವಾಗಿ ಗದಗದಲ್ಲಿ.

ಶಿರಸಿ-ಕಾರವಾರದಲ್ಲಿ ಸಂಚರಿಸುವ ಯಾತ್ರೆ ಕಾರವಾರದಲ್ಲಿ. ಕಲಬುರಗಿ, ಬೀದರ್, ಯಾದಗಿರಿಯಲ್ಲಿ ನಡೆಯುವ ಯಾತ್ರೆ ಬೀದರ್‌ನಿಂದ ಪ್ರಾರಂಭವಾಗಿ ಕಲಬುರಗಿಯಲ್ಲಿ ಹಾಗೂ ಬಳ್ಳಾರಿ-ರಾಯಚೂರು, ಕೊಪ್ಪಳ, ವಿಜಯನಗರದಲ್ಲಿ ಸಂಚರಿಸುವ ಯಾತ್ರೆ ಗಂಗಾವತಿ ಅಂಜನಾದ್ರಿ ಬೆಟ್ಟದ ಬಳಿಯಿಂದ ಆರಂಭವಾಗಿ ಮಾನ್ವಿಯಲ್ಲಿ ಸಂಪನ್ನಗೊಳ್ಳಲಿವೆ.

ಒಂದು ರಥದ ಜತೆ 10 ಪ್ರಮುಖರ ಸಹಿತ 20 ಕ್ಕೂ ಹೆಚ್ಚು ವಿಎಚ್‌ಪಿ, ಬಜರಂಗದಳದ ಕಾರ‌್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಪ್ರತಿ ರಥದ ಅಲಂಕಾರವೂ ಪ್ರತ್ಯೇಕವಾಗಿರುತ್ತದೆ. ಯಾತ್ರೆ ಸಾಗುವ ಮಾರ್ಗದಲ್ಲಿ ಕಲಾತಂಡಗಳೂ ಭಾಗವಹಿಸಲಿವೆ ಎಂದು ದಕ್ಷಿಣ ಪ್ರಾಂತ್ಯ ಧರ್ಮಾಚಾರ‌್ಯ ಸಂಪರ್ಕ ಪ್ರಮುಖ ಎನ್.ಓಂಕಾರ್ ತಿಳಿಸಿದ್ದಾರೆ.

ವಿಶೇಷ ಅಲಂಕಾರ: ದಕ್ಷಿಣ ಪ್ರಾಂತ್ಯದಲ್ಲಿ ಸಂಚರಿಸುವ ರಥಯಾತ್ರೆಗೆ ಸಿದ್ಧತೆ ನಡೆದಿದೆ. ಭಾನುವಾರ ಚಿತ್ರದುರ್ಗಕ್ಕೆ ಅರಸೀಕೆರೆಯಿಂದ ವಾಹನ ಬರಲಿದೆ. ನಗರದಲ್ಲೇ ಇದನ್ನು ವಿಶೇಷವಾಗಿ ಅಲಂಕರಿಸಲಾಗುತ್ತದೆ.-ಎಸ್.ಆರ್.ಪ್ರಭಂಜನ್, ವಿಎಚ್‌ಪಿ ದಕ್ಷಿಣ ಪ್ರಾಂತ್ಯ ಸಹ ಸಂಯೋಜಕ

ಜಾಗೃತಿ: ಶೌರ್ಯ ಜಾಗರಣ ರಥಯಾತ್ರೆ ಹಿಂದು ಸಮಾಜದಲ್ಲಿ ಹಾಗೂ ಜನವರಿಯಲ್ಲಿ ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ಮಂದಿರ ಉದ್ಘಾಟನೆ ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರವನ್ನು ವಹಿಸಲಿದೆ.- ಪಿ.ರುದ್ರೇಶ್, ವಿಎಚ್‌ಪಿ ಜಿಲ್ಲಾ ಕಾರ‌್ಯದರ್ಶಿ, ಚಿತ್ರದುರ್ಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net