

ಮದ್ದೂರು: ಪಟ್ಟಣದ ಕೊಲ್ಲಿ ವೃತ್ತಕ್ಕೆ ಅ.4ರಂದು ಬೆಳಗ್ಗೆ 10.30ಕ್ಕೆ ಶೌರ್ಯ ಜಾಗರಣ ರಥಯಾತ್ರೆ ಆಗಮಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳು ಭಾಗವಹಿಸಬೇಕೆಂದು ವಿಶ್ವ ಹಿಂದು ಪರಿಷತ್ ಜಿಲ್ಲಾ ಖಜಾಂಚಿ ನೈದಿಲೆ ಚಂದ್ರು ಮನವಿ ಮಾಡಿದರು.
ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಕಾಶಿವಿಶ್ವೇಶ್ವರಯ್ಯಸ್ವಾಮಿ ದೇಗುಲದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬುಧವಾರ ಬೆಳಗ್ಗೆ 10.30ಕ್ಕೆ ಕೊಲ್ಲಿ ಸರ್ಕಲ್‌ನಿಂದ ಶೋಭಾಯಾತ್ರೆ ಆರಂಭಗೊಂಡು ಪಟ್ಣಣದ ಪ್ರಮುಖ ಬೀದಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಿಂದುಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ನಂತರ 11.30ಕ್ಕೆ ಸಂಜಯ ಟಾಕೀಸ್ ಬಳಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ ಎಂದರು.
ಹಿಂದುತ್ವದ ಉಳಿವಿಗಾಗಿ, ಹಿಂದು ಸಮಾಜದ ರಕ್ಷಣೆಗಾಗಿ, ಹಿಂದುಗಳ ಮನದಲ್ಲಿ ದೇಶಭಕ್ತಿ ಭಾವನೆಯನ್ನು ಜಾಗೃತಗೊಳಿಸಲು 1964ರಲ್ಲಿ ವಿಶ್ವ ಹಿಂದು ಪರಿಷತ್ ಪ್ರಾರಂಭವಾಗಿ ಅವಿರತರಾಗಿ ಶ್ರಮಿಸುತ್ತ, ಧರ್ಮರಕ್ಷಣೆಯ ಪವಿತ್ರ ಕಾರ್ಯದೊಂದಿಗೆ 59 ವಸಂತಗಳನ್ನು ಪೂರೈಸಿ 60ನೇ ಷಷ್ಠಿಪೂರ್ತಿ ವರ್ಷಾಚರಣೆಯಲ್ಲಿ ಈ ಶೌರ್ಯ ಜಾಗರಣ ರಥಯಾತ್ರೆ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ ಎಂದರು.
ಬಜರಂಗದಳ ತಾಲೂಕು ಸಂಚಾಲಕ ಗೌತಮ್, ವಿಶ್ವ ಹಿಂದು ಪರಿಷತ್ ತಾಲೂಕು ಕಾರ್ಯದರ್ಶಿ ರವಿಶಂಕರ್, ಮುಖಂಡರಾದ ಮಲ್ಲಿಕಾರ್ಜುನ, ವೀರಭದ್ರಸ್ವಾಮಿ, ಚೈತನ್ಯ ಆರಾಧ್ಯ, ಧನಂಜಯ, ಕಾಶಿ ವಿಶ್ವೇಶ್ವರಯ್ಯಸ್ವಾಮಿ ದೇಗುಲದ ಪ್ರಧಾನ ಅರ್ಚಕ ರಾಘವೇಂದ್ರರಾವ್ ಇದ್ದರು.