

ರಾಯಚೂರು: ಮಾನ್ವಿಯ ಧ್ಯಾನ ಮಂದಿರದಲ್ಲಿ ಅ.15ರಂದು ಮಧ್ಯಾಹ್ನ 2ಕ್ಕೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಿಂದ ಹಮ್ಮಿಕೊಂಡಿರುವ ಶೌರ್ಯ ಜಾಗರಣ ರಥಯಾತ್ರೆಯ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ವಿಜಯಕುಮಾರ ಹೂಗಾರ ತಿಳಿಸಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಅ.11ರಂದು ರಥಯಾತ್ರೆ ಸಿಂಧನೂರು ಪ್ರವೇಶಿಸಲಿದ್ದು, 5 ದಿನಗಳ ಕಾಲ ಜಿಲ್ಲೆಯಲ್ಲಿ ಯಾತ್ರೆ ನಡೆಯಲಿದೆ. ಮಾನ್ವಿಯಲ್ಲಿ ಬಳ್ಳಾರಿ ವಿಭಾಗದ ಸಮಾರೋಪ ಸಮಾರಂಭ ನಡೆಸಲಾಗುತ್ತಿದೆ ಎಂದರು.
ರಥಯಾತ್ರೆ ಬಳ್ಳಾರಿಯಿಂದ ಆರಂಭವಾಗಿದ್ದು, ವಿಜಯನಗರ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯಲ್ಲಿ ಸಂಚರಿಸುತ್ತಿದೆ. ಯುವ ಜನರಲ್ಲಿ ಪೂರ್ವಜರ ಬಗ್ಗೆ ಹಾಗೂ ಧರ್ಮ, ಸಂಸ್ಕೃತಿ ಬಗ್ಗೆ ಜಾಗೃತಿ ಮೂಡುವ ನಿಟ್ಟಿನಲ್ಲಿ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ.
ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ವಹಿಸಲಿದ್ದು, ವಿಶೇಷ ಆಹ್ವಾನಿತರಾಗಿ ಪರಿಷತ್ತಿನ ರಾಷ್ಟ್ರೀಯ ಸಹ ಕಾರ್ಯದರ್ಶಿ ಹಾಗೂ ಅಯೋಧ್ಯಾ ರಾಮ ಮಂದಿರ ನಿರ್ಮಾಣದ ಉಸ್ತುವಾರಿ ಗೋಪಾಲ ನಾಗರಕಟ್ಟೆ ಆಗಮಿಸಲಿದ್ದಾರೆ.
ಪರಿಷತ್ ಜಿಲ್ಲಾಧ್ಯಕ್ಷ ಸರ್ವೇಶ್ವರ್ ರಾವ್, ಬಜರಂಗದಳದ ಸಂಯೋಜಕ ರವಿಕುಮಾರ, ನಾಗಭೂಷಣ, ಕೃಷ್ಣ ದೊರೆ ಸೇರಿದಂತೆ ಹಲವು ಮುಖಂಡರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ವಿಜಯಕುಮಾರ ಹೂಗಾರ ತಿಳಿಸಿದರು.
ಈ ಸಂದರ್ಭದಲ್ಲಿ ಪರಿಷತ್ತಿನ ಪದಾಕಾರಿಗಳಾದ ಡಾ.ನಾಗರಾಜ ಭಾಲ್ಕಿ, ಶರಣಬಸವ, ರವಿಕುಮಾರ ಉಪಸ್ಥಿತರಿದ್ದರು.