

ಮಡಿಕೇರಿ:
ವಿಶ್ವ ಹಿಂದೂ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಶೌರ್ಯ ಜಾಗರಣಾ ರಥಯಾತ್ರೆ ಶುಕ್ರವಾರ ಮಡಿಕೇರಿಗೆ ಆಗಮಿಸಿದ ಸಂದರ್ಭ ಹಿಂದೂ ಸಂಘಟನೆಗಳ ಪ್ರಮುಖರು ಮತ್ತು ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. ಕೇರಳದ ಚಂಡೆ ವಾದ್ಯಗಳೊಂದಿಗೆ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತಕ್ಕೆ ಆಗಮಿಸಿದ ಶೌರ್ಯ ಜಾಗರಣಾ ರಥಕ್ಕೆ ಮಾಜಿ ಶಾಸಕ ಕೆ.ಜಿ. ಬೋಪಯ್ಯ ತೆಂಗಿನ ಕಾಯಿ ಒಡೆದು, ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಬಳಿಕ ವಾದ್ಯಗೋಷ್ಟಿಯ ಸಹಿತ ಜನರಲ್ ತಿಮ್ಮಯ್ಯ ವೃತ್ತದವರೆಗೆ ಮೆರವಣಿಗೆ ಸಾಗಲಾಯಿತು. ಈ ಸಂದರ್ಭ ವೇದ ಮಂತ್ರಘೋಷಗಳ ಸಹಿತ ರಥಕ್ಕೆ ಪೂಜೆ ಸಲ್ಲಿಸಲಾಯಿತು. ಬಳಿಕ ಸಂಪಾಜೆ ಮಾರ್ಗವಾಗಿ ಪುತ್ತೂರು ಕಡೆಗೆ ರಥವನ್ನು ಬೀಳ್ಕೊಡಲಾಯಿತು.
ಇದಕ್ಕೂ ಮುನ್ನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪ್ರತಿಮೆಗೆ ಗಣ್ಯರು ಸಹಿತ ಸಂಘಟನೆಗಳ ಪ್ರಮುಖರು ಪುಷ್ಪಾರ್ಚನೆ ನಡೆಸಿ ಗೌರವ ಸಮರ್ಪಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಕೃಷ್ಣ ಮೂರ್ತಿ, ವಿಶ್ವ ಹಿಂದೂ ಪರಿಷತ್ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂವತ್ಸರದಲ್ಲಿ ೧೯೬೪ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ೨೦೨೩-೨೪ರಲ್ಲಿ ಷಷ್ಠಿ ಪೂರ್ಣ ವರ್ಷಾಚರಣೆ ನಡೆಸುತ್ತಿದೆ. ಇದರ ಅಂಗವಾಗಿ ಇಡೀ ದೇಶಾದ್ಯಂತ ಶೌರ್ಯ ಜಾಗರಣಾ ರಥ ಯಾತ್ರೆ ನಡೆಸಲಾಗುತ್ತಿದ್ದು, ಸಮಾಜದ ವಿವಿಧ ಸ್ಥರಗಳಲ್ಲಿರುವ ಹಿಂದೂಗಳನ್ನು ಒಂದು ಗೂಡಿಸಿಸುವ ಉದ್ದೇಶ ರಥಯಾತ್ರೆ ಹೊಂದಿದೆ ಎಂದರು.
ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ಮುಖಂಡರಾದ ಸುರೇಶ್ ಮುತ್ತಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಅರುಣ್ ಕುಮಾರ್, ಜಿಲ್ಲಾ ವಕ್ತಾರ ಮಹೇಶ್ ಜೈನಿ, ನಗರಾಧ್ಯಕ್ಷ ಮನು ಮಂಜುನಾಥ್, ನಗರ ಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್, ಸದಸ್ಯ ಕೆ.ಎಸ್.ರಮೇಶ್, ಅಪ್ಪಣ್ಣ, ಸಬಿತಾ, ಕಲಾವತಿ, ಬಿಜೆಪಿ ಪ್ರಮುಖರಾದ ಅರುಣ್ ಕುಮಾರ್, ಜಗದೀಶ್, ಮಹಿಳಾ ಮೋರ್ಚಾದ ಕನ್ನಿಕೆ, ಕುಡೆಕಲ್ ಸವಿತಾ ಸಂತೋಷ್ ಮತ್ತಿತರರು ಇದ್ದರು