

ತೀರ್ಥಹಳ್ಳಿ: ಕಾಂಗ್ರೆಸ್ಸಿನ ಭದ್ರಕೋಟೆ ಎನಿಸಿರುವ ಕ್ಷೇತ್ರಗಳನ್ನೂ ಛಿದ್ರಗೊಳಿಸಿ ಎಲ್ಲೆಡೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಜಯಶೀಲರಾಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಯುವ ಮೋರ್ಚಾದಿಂದ ಶನಿವಾರ ಪಟ್ಟಣದಲ್ಲಿ ಆಯೋಜಿಸಿದ್ದ ಬೈಕ್ ರ‌್ಯಾಲಿಯಲ್ಲಿ ಪಾಲ್ಗೊಂಡು ಕುಶಾವತಿ ನೆಹರೂ ಪಾರ್ಕಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ಸಿನ ಹಣದ ಹೊಳೆ ಮತ್ತು ಅಧಿಕಾರದ ಪ್ರಭಾವದ ನಡುವೆಯೂ ಆ ಪಕ್ಷದ ಭದ್ರಕೋಟೆಯಾಗಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರ ಸೇರಿದಂತೆ ಮೈಸೂರು, ಚಾಮರಾಜನಗರದಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ತೊಡಗಿದೆ. ಮಹಿಳೆಯರು ಮನೆಯಿಂದ ಹೊರ ಬೀಳಲು ಭಯಪಡುವಂತವ ಸ್ಥಿತಿ ನಿರ್ಮಾಣವಾಗಿದೆ. ಮನೆಯಿಂದ ಹೊರ ಹೋಗುವ ಮಹಿಳೆ ಸುರಕ್ಷಿತವಾಗಿ ಮನೆಗೆ ಮರಳುವ ಭರವಸೆಯೂ ಇಲ್ಲ. ಕಾಂಗ್ರೆಸ್ ರಕ್ಷಣೆಯಿಂದ ಅಲ್ಪಸಂಖ್ಯಾತರಿಗೆ ಕಾನೂನಿನ ಭಯವೇ ಇಲ್ಲದಂತಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸಿದ್ದರಾಮಯ್ಯ ಇಡೀ ರಾಜ್ಯದ ಮುಖ್ಯಮಂತ್ರಿಯೋ ಅಥವಾ ಅಲ್ಪಸಂಖ್ಯಾತರ ಮುಖ್ಯಮಂತ್ರಿಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದವರ ಮೇಲೆ ಕ್ರಮಕೈಗೊಳ್ಳಲಿಲ್ಲ. ನೇಹಾ ಹಿರೇಮಠ ಪ್ರಕರಣ ವೈಯಕ್ತಿಕ ಕಾರಣಕ್ಕಾಗಿ ನಡೆದಿದೆ ಎಂದು ಸಿದ್ದರಾಮಯ್ಯ ಹೇಳಿರುವುದು ಖಂಡನೀಯ. ಬಿಜೆಪಿ ಯಾವತ್ತೂ ಅಲ್ಪಸಂಖ್ಯಾತರ ವಿರೋಧಿಯಲ್ಲ. ಯಡಿಯೂರಪ್ಪ ಅಧಿಕಾರವಧಿಯಲ್ಲಿ 500 ಕೋಟಿ ರೂ. ಹಜ್ ಭವನದ ನಿರ್ಮಾಣಕ್ಕೆ ನೀಡಿದ್ದರು. ಅಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳನ್ನು ವಂಚಿಸಲು ಮುಂದಾಗಿದೆ ಎಂದರು.
ರೈತ ವಿರೋಧಿ ನೀತಿಯನ್ನು ತಾಳಿರುವ ಸರ್ಕಾರದ ನೀತಿಯಿಂದಾಗಿ ಬರದ ತೀವ್ರತೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 3455 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿದ್ದರೂ, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಕೊಡಬೇಕಾದ ಪರಿಹಾರದ ಹಣವನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ಆಡಳಿತದಲ್ಲಿ 800 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿ.ವೈ.ರಾಘವೇಂದ್ರ ಈ ಮೊದಲು ಮೂರು ಬಾರಿ ಸಂಸತ್ ಸದಸ್ಯರಾಗಿ ವಿರೋಧಿಗಳೂ ಮೆಚ್ಚುವಂತೆ ಕೆಲಸ ಮಾಡಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಹ ನರೇಂದ್ರ ಮೋದಿ ಅವರ ಆಡಳಿತವನ್ನು ಮೆಚ್ಚಿ ನಮ್ಮೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದರು.
ಶಾಸಕರಾದ ಆರಗ ಜ್ಞಾನೇಂದ್ರ, ಹರೀಶ್ ಪೂಂಜಾ, ಧೀರಜ್ ಮುನಿರಾಜ್ ಮಾತನಾಡಿದರು. ಬಾಳೇಬೈಲಿನ ಹೊಸ ಸೇತುವೆಯಿಂದ ಕುಶಾವತಿಯವರೆಗೆ ನೂರಾರು ಕಾರ್ಯಕರ್ತರು ಬೈಕ್ ರ‌್ಯಾಲಿ ನಡೆಸಿದರು.
ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ದೇವಾಡಿಗ, ಮಂಡಲ ಅಧ್ಯಕ್ಷ ಹೆದ್ದೂರು ನವೀನ್, ತಾಲೂಕು ಜೆಡಿಎಸ್ ಅಧ್ಯಕ್ಷ ಕುಣಜೆ ಕಿರಣ್, ಪ್ರಮುಖರಾದ ಕುಕ್ಕೆ ಪ್ರಶಾಂತ್, ಸಾಲೇಕೊಪ್ಪ ರಾಮಚಂದ್ರ ಇತರರಿದ್ದರು.