

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ತಲಪಾಡಿ ದೇವಿಪುರದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶತ ಚಂಡಿಕಾಯಾಗ ಸಮಿತಿ ಆಶ್ರಯದಲ್ಲಿ ಡಿ.23ರಿಂದ 30ರವರೆಗೆ ಬ್ರಹ್ಮಕಲಶ ಸಹಿತ ಶತ ಚಂಡಿಕಾಯಾಗ, ವಿವಿಧ ಧಾರ್ಮಿಕ, ಸಾಂಸ್ಕೃತಿಕ, ವೈದಿಕ ಕಾರ್ಯಕ್ರಮ ಜರುಗಲಿದ್ದು, ಸಿದ್ಧತಾ ಕಾರ್ಯ ನಡೆಯುತ್ತಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಮೋಹನ್ ದಾಸ್ ರೈ ಸಾಂತ್ಯಗುತ್ತು ಹೇಳಿದರು.
ತಲಪಾಡಿ ದೇವಸ್ಥಾನ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಹ್ಮಶ್ರೀ ವರ್ಕಾಡಿ ದಿನೇಶಕೃಷ್ಣ ತಂತ್ರಿ ನೇತೃತ್ವದಲ್ಲಿ ಪ್ರಧಾನ ಅರ್ಚಕ ತಲಪಾಡಿ ಗಣೇಶ್ ಭಟ್ ಉಪಸ್ಥಿತಿಯಲ್ಲಿ, ರಾಜಪುರೋಹಿತ ವಿದ್ವಾನ್ ವಿಷ್ಣುಮೂರ್ತಿ ಭಟ್ ಪೌರೋಹಿತ್ಯದಲ್ಲಿ ನವೀಕೃತ ಧ್ವಜಸ್ತಂಭ ಕಲಶಾಭಿಷೇಕ, ಶತ ನಾರೀಕೇಳ ಗಣಪತಿ ಯಾಗ, ಮೂಡಪ್ಪ ಸೇವೆ, ರುದ್ರಯಾಗ, ವಡೆ ಸೇವೆ, ಶತ ಚಂಡಿಕಾಯಾಗ, ಚಿನ್ನದ ಪೀಠ ಪ್ರಭಾವಳಿ, ಅಟ್ಟೆಕನ್ನಟಿ ಸಮರ್ಪಣೆ, ಶ್ರೀ ರಂಗಪೂಜೆ ಉತ್ಸವ ಜರುಗಲಿವೆ.
23ರಂದು ವೈದಿಕ ಕಾರ್ಯಕ್ರಮಗಳೊಂದಿಗೆ ಮುಹೂರ್ತ, ದ್ವಾದಶ ನಾರಿಕೇಳ ಯಾಗ, ರುದ್ರ ಪಾರಾಯಣ ಆರಂಭ, ರಾತ್ರಿ 7.30ಕ್ಕೆ ಮಹಾಪೂಜೆ ನಡೆಯಲಿದೆ. 24ರಂದು ಸಂಜೆ 6ಕ್ಕೆ ಧ್ವಜ ಕಲಶಾಧಿವಾಸ, ಪ್ರಧಾನ ಹೋಮ, 25ರಂದು ಬೆಳಗ್ಗೆ 7.30ಕ್ಕೆ ಬ್ರಹ್ಮ ಕಲಶಾಭಿಷೇಕ, 9.10ಕ್ಕೆ ಧ್ವಜ ಕಲಶಾಭಿಷೇಕ, ಸಂಜೆ 4ರಿಂದ 6.30ರವರೆಗೆ ಶ್ರೀ ಗಣೇಶ ಮಂದಿರ ಬೀರಿ ವಠಾರದಿಂದ ಹಸಿರುವಾಣಿ ಹೊರೆಕಾಣಿಕೆ ಶೋಭಾಯಾತ್ರೆ ನಡೆಯಲಿದೆ. ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ಪ್ರದಾನ ಅರ್ಚಕ ಸೂರ್ಯನಾರಾಯಣ ಹೊಳ್ಳ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ರಾತ್ರಿ 7ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಬಾಕ್ರಬೈಲು ಪಾತೂರು ಶ್ರೀ ಸೂರ್ಯೇಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ರವೀಂದ್ರನಾಥ ಆಳ್ವ ಮಲಾರುಬೀಡು ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಕಟೀಲಿನ ಆನುವಂಶೀಯ ಅರ್ಚಕ ಹರಿನಾರಾಯಣ ಅಸ್ರಣ್ಣ ಉದ್ಘಾಟಿಸಲಿದ್ದಾರೆ. ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಶಾಸಕ ಅಶೋಕ್ ರೈ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಭಾಗವಹಿಸಲಿದ್ದಾರೆ ಎಂದರು.
26ರಂದು ಶ್ರೀದೇವಿ ಸಪ್ತಶತಿ ಪಾರಾಯಣ ಆರಂಭ, ಶ್ರೀ ರುದ್ರಪಾರಾಯಣ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ಜರುಗಿ, ರಾತ್ರಿ 8ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಸಂಸ್ಥೆ ಮಂಗಳೂರು ಅಧ್ಯಕ್ಷ ಶಾಂತರಾಮ ಶೆಟ್ಟಿ ಸಿ.ಎ. ಅಧ್ಯಕ್ಷತೆ ವಹಿಸಲಿದ್ದು, ಎಂಆರ್‌ಜೆ ಗ್ರೂಪ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಉದ್ಘಾಟಿಸಲಿದ್ದಾರೆ. 27ರಂದು ಅಷ್ಟೋತ್ತರ ಶತ ನಾರೀಕಳ ಗಣಪತಿ ಯಾಗ, ಕಲಶಾಭಿಷೇಕ, ಶ್ರೀ ರುದ್ರಪಾರಾಯಣ, ಬೆಳಗ್ಗೆ 10.30ಕ್ಕೆ ನಾಗ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ಮಹಾಪೂಜೆ, ಅನ್ನಸಂತರ್ಪಣೆ, ಶ್ರೀ ಚಕ್ರಪೂಜೆ, ಮೂಡಪ್ಪ ಸೇವೆ, ಮಹಾಪೂಜೆ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ವಿವೇಕ್ ಶೆಟ್ಟಿ ಬೊಲ್ಯಗುತ್ತು ಅಧ್ಯಕ್ಷತೆ ವಹಿಸಲಿದ್ದು, ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಕೂಳೂರು ಮುಖ್ಯ ಅತಿಥಿಯಾಗಿರುವರು. ಡಾ.ಪ್ರಭಾಕರ ಭಟ್ ಕಲ್ಲಡ್ಕ ಧಾರ್ಮಿಕ ಉಪನ್ಯಾಸ ನೆರವೇರಿಸಲಿದ್ದಾರೆ. 28ರಂದು ಬೆಳಗ್ಗೆ 7.30ಕ್ಕೆ ಶ್ರೀ ರುದ್ರಯಾಗ, ರುದ್ರಾಭಿಷೇಕ, ಶ್ರೀ ವೀರಭದ್ರ ದೇವರಿಗೆ ವಡೆಸೇವೆ ಮಹಾಪೂಜೆ, ಅಷ್ಟಾವಧಾನ ಸೇವೆ, ಗಣಪತಿ ರಂಗಪೂಜೆ, ಉತ್ಸವ ಬಲಿ ನಡೆಯಲಿದೆ ಎಂದರು.
ನಿಟ್ಟೆ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ವಿನಯ ಹೆಗ್ಡೆ, ಅಧ್ಯಕ್ಷತೆಯಲ್ಲಿ ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಎ.ಜೆ.ಶೆಟ್ಟಿ ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪ್ರಕಾಶ್ ಪಿ.ಎಸ್. ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. 29ರಂದು ಬೆಳಗ್ಗೆ 7.30ಕ್ಕೆ ಶತ ಚಂಡಿಕಾಯಾಗ, 11.30ಕ್ಕೆ ಪೂರ್ಣಾಹುತಿ ನಡೆಯಲಿದ್ದು, ಮಧ್ಯಾಹ್ನ 12ಕ್ಕೆ ಚಿನ್ನದ ಪೀಠ ಪ್ರಭಾವಳಿ, ಚಿನ್ನದ ಅಟ್ಟೆಕನ್ನಟಿ ಸಮರ್ಪಣೆ ಮಹಾಪೂಜೆ, ಅನ್ನಸಂತರ್ಪಣೆ, ರಂಗಪೂಜೆ, ಮಹೋತ್ಸವ ಬಲಿ, ಅಷ್ಟಾವಧಾನ ಸೇವೆ ಜರುಗಲಿದೆ. 30ರಂದು ನವಕ ಪ್ರದಾನ, ಕಲಶಾಭಿಷೇಕ, ಸಂಪ್ರೋಕ್ಷಣೆ, ಮಹಾಪೂಜೆ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆಯಿಂದ ಮುಕ್ತಾಯಗೊಳ್ಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರದಾನ ಅರ್ಚಕ ಗಣೇಶ್ ಭಟ್ ಪಂಜಾಳ, ಸಮಿತಿ ಸದಸ್ಯರಾದ ನಾರಾಯಣ ಕಜೆ, ಮೋಹನ್‌ದಾಸ್ ಶೆಟ್ಟಿ ನೆತ್ತಿಲಬಾಳಿಕೆ, ಧರ್ಮಪಾಲ ಭಂಡಾರಿ ದೇವಿಪುರ, ಯುವರಾಜ ದೇವಿನಗರ, ವರುಣ್‌ರಾಜ್ ತಲಪಾಡಿ, ನಯನ ಪಾರ್ಥಸಾರಥಿ ಕಿನ್ಯ, ಆಶಾ ಪದ್ಮನಾಭ ಶೆಟ್ಟಿ ಬಾವ ಉಪಸ್ಥಿತರಿದ್ದರು.
ದೇವಸ್ಥಾನಕ್ಕೆ ಸೇರಿದ ಬಾಕಿಮಾರು ಗದ್ದೆ ಅನ್ಯರ ಕೈಯಲ್ಲಿರುವುದರಿಂದ ಅದನ್ನು ಮತ್ತೆ ದೇವಸ್ಥಾನದ ಆಸ್ತಿಯನ್ನಾಗಿ ಮಾಡಬೇಕಿದೆ. ಕ್ಷೇತ್ರದ ಕೆರೆ ಅಭಿವೃದ್ಧಿ, ಅತಿಥಿ ಗೃಹ, ಅನ್ನಛತ್ರ, ಗೋಶಾಲೆ, ಸಭಾಂಗಣ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ. ದೇವಿಯ ಹೆಸರಿನಲ್ಲಿ ಸ್ಥಳೀಯ ಮಕ್ಕಳು ಉಚಿತ ಶಿಕ್ಷಣ ಪಡೆಯಬೇಕೆನ್ನುವ ನೆಲೆಯಲ್ಲಿ ಶಾಲೆ ಸ್ಥಾಪಿಸುವ ಉದ್ದೇಶ ಇದೆ. - ಗಣೇಶ್ ಭಟ್, ಪ್ರಧಾನ ಅರ್ಚಕರು