ಸಂಸ್ಕೃತ ಉಳಿದರೆ ಸಂಸ್ಕೃತಿ ಉಳಿವು : ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿಕೆ

DSC_5499
Published on

ತುಮಕೂರು : ಸಂಸ್ಕೃತ ಮತ್ತು ಸಂಸ್ಕೃತಿ ಭಾರತದ ಶ್ರೇಷ್ಠ ರತ್ನಗಳು. ಸಂಸ್ಕೃತ ಭಾಷೆ ಅಗಾಧವಾದ ಜ್ಞಾನ ಸಿಂಧು, ಅಗಾಧವಾದ ಜ್ಞಾನ ಮತ್ತು ಗಟ್ಟಿಯಾದ ಧ್ವನಿಯಿಂದ ಇಂದಿಗೂ ಉಳಿದಿದೆ. ಈ ಭಾಷೆಯ ಆಳ, ಅಗಲ ತಿಳಿಯುವುದೇ ಒಂದು ದೊಡ್ಡ ಕಾರ್ಯ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದರು.

ಸಿದ್ಧಗಂಗಾ ಮಠದಲ್ಲಿ ಸಿದ್ಧಗಂಗಾ ವಿದ್ಯಾಸಂಸ್ಥೆ, ಕರ್ನಾಟಕ ಸಂಸ್ಕೃತ ಕಾಲೇಜು ಬೋಧಕ ಮತ್ತು ಬೋಧಕೇತರರ ಸಂಘ ಹಾಗೂ ಕರ್ನಾಟಕ ಸಂಸ್ಕೃತ ವಿವಿ ಸಹಯೋಗದಲ್ಲಿ ಬುಧವಾರ ರಾಷ್ಟ್ರಸ್ತರದ ಸಂಗೋಷ್ಠಿ ಶಾಸ್ತ್ರಕಾವ್ಯಕಲಾದರ್ಶನಂ ಮಹಾಭಾರತಮ್ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ವಿಶ್ವದಾದ್ಯಂತ ಪುರಾತನ ಭಾಷೆಗಳಲ್ಲಿ ಪ್ರಮುಖವಾದ ಭಾಷೆ ಸಂಸ್ಕೃತ. ಭಾಗವತ ಮೊದಲಾದ ಪುರಾಣಗಳು ಸಂಸ್ಕೃತದಲ್ಲಿವೆ. ವೇದಗಳಲ್ಲಿ ಅಗಾಧವಾದ ಜ್ಞಾನವಿದೆ, ಜೀವನ ಸತ್ಯವಿದೆ. ಸಂಸ್ಕೃತ ಉಳಿದರೆ ಸಂಸ್ಕೃತಿ ಉಳಿಯುತ್ತದೆ ಎಂಬ ಭಾವನೆ ನೂರಕ್ಕೆ ನೂರು ಸತ್ಯ ಎಂದರು.

ವಿಶ್ವದಲ್ಲಿ ಎಷ್ಟೋ ಭಾಷೆಗಳು ಬಂದು ಹೋಗಿವೆ. ಆದರೆ, ಸಂಸ್ಕೃತ ಈಗಲೂ ಉಳಿದಿದೆ ಎಂದರೆ ಅದು ಬಹಳಷ್ಟು ಗಟ್ಟಿತನದಿಂದ ಉಳಿದುಕೊಂಡಿರುವ ಭಾಷೆ ಎಂಬುದಕ್ಕೆ ಸಾಕ್ಷಿ. ಸಂಸ್ಕೃತ ಬೋಧಕರ ಸಂಘಟನೆ ಸಂಸ್ಕೃತ ಭಾಷೆ ಉಳಿಸಲು ಬಹಳ ಹಿಂದಿನಿಂದಲೂ ಶ್ರಮಿಸುತ್ತಾ ಬಂದಿದೆ. ಅವರ ಶ್ರಮದಿಂದ ಸಂಸ್ಕೃತ ಶಾಲೆಗಳಲ್ಲಿ ಈಗಲೂ ವಿದ್ಯಾರ್ಥಿಗಳಿಗೆ ಬೋಧನಾ ವಿಷಯವಾಗಿದೆ ಎಂದು ಹೇಳಿದರು.

ನಿರ್ಲಕ್ಷ್ಯದ ಮಧ್ಯೆಯೂ ಸಂಸ್ಕೃತ ಉಳಿದಿದ್ದರೆ ಅದರ ಶ್ರೇಯಸ್ಸು ಸಂಸ್ಕೃತ ಬೋಧಕರ ಸಂಘಟನೆಗಳಿಗೆ ಸಲ್ಲಬೇಕು. ಸಂಸ್ಕೃತ ಕಾಲೇಜು, ಬೋಧಕ, ಬೋಧಕೇತರ ಸಂಘಟನೆಗಳು ಹಲವಾರು ವರ್ಷಗಳಿಂದ ರಾಷ್ಟ್ರಮಟ್ಟದ ಗೋಷ್ಠಿ ನಡೆಸಿಕೊಂಡು ಬರುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಸಣ್ಣ ಮಕ್ಕಳಿಂದ ದೊಡ್ಡವರವರೆಗೆ ಸಂಸ್ಕೃತವನ್ನು ಲೀಲಾಜಾಲವಾಗಿ ಮಾತನಾಡುವ ವಾತಾವರಣ ಸೃಷ್ಟಿಯಾಗಬೇಕು. ಸಂಸ್ಕೃತ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಸಮ್ಮೇಳನಗಳ ಅವಶ್ಯವಿದೆ, ಯಾವುದೇ ಭಾಷೆಗಳನ್ನು ಕಷ್ಟಪಟ್ಟು ಕಲಿಯಬಾರದು, ಇಷ್ಟಪಟ್ಟು ಕಲಿತಾಗ ಭಾಷೆ ನಮ್ಮದಾಗುತ್ತದೆ, ಭಾಷೆ ಶ್ರೀಮಂತವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಪ್ರೊ.ಕೆ.ಇ.ದೇವನಾಥನ್ ಮಾತನಾಡಿ, ಮಹಾಭಾರತವನ್ನು ನಾವು ಚಿಂತಿಸಿದಾಗ ನಮ್ಮ ನಿತ್ಯ ಜೀವನದಲ್ಲಿ ನಾವು ಅದನ್ನು ಹೇಗೆ ಅನುಸರಿಸಿಕೊಳ್ಳಬಹುದು ಎಂಬುದು ಗೊತ್ತಾಗುತ್ತದೆ, ಮಹಾಭಾರತ ಆಕಾರಗಳಿಂದಲೂ ಹಾಗೂ ವಿಷಯಗಳಿಂದಲೂ ಮಹತ್ವದ್ದಾಗಿದೆ ಎಂದರು.

ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು ತಿಳಿಸುವ ವಿಷಯಗಳು ಬಹಳಷ್ಟಿವೆ. ಇದಕ್ಕಾಗಿ ಈ ರೀತಿಯ ಗೋಷ್ಠಿಗಳು ನಡೆಸುವುದು ಅಗತ್ಯವಾಗಿದೆ ಎಂದರು. ಸಮ್ಮೇಳನದಲ್ಲಿ ಆಚಾರ್ಯ ಟಿ.ಎನ್. ಪ್ರಭಾಕರ್, ಡಾ. ನಾಗೇಂದ್ರ ಮತ್ತಿತರರು ಇದ್ದರು.

ಮಠಗಳಿಂದ ಸಂಸ್ಕೃತ ಉಳಿವು : ಸಂಸ್ಕೃತ ಭಾಷೆಯನ್ನು ಸದಾ ಅಮೃತ ಭಾಷೆಯನ್ನಾಗಿ ಬೆಳೆಸುವ ಕೆಲಸವನ್ನು ಸಂಸ್ಕೃತ ಭಾಷೆ ಬೋಧಕರ ಸಂಘಟನೆಗಳು ಮಾಡುತ್ತಿವೆ. ಸಂಸ್ಕೃತ ಭಾಷೆಗೆ ಮಠ ಮಾನ್ಯಗಳು ಪ್ರಾಮುಖ್ಯತೆ ನೀಡುತ್ತಿವೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ಕರ್ನಾಟಕದಲ್ಲಿ ಸಂಸ್ಕೃತ ಭಾಷೆಗಳಿಗೆ ಒತ್ತು ಕೊಟ್ಟಿರುವುದು ಮಠ ಮಾನ್ಯಗಳು ಮಾತ್ರ ಎಂದ ಅವರು, ಪ್ರತಿಯೊಬ್ಬರೂ ಸಂಸ್ಕೃತ ಓದಬೇಕು. ಯಾವುದೇ ಮಡಿವಂತಿಕೆ ಇಲ್ಲದೆ ಸಂಸ್ಕೃತ ಭಾಷೆಯನ್ನು ಎಲ್ಲರೂ ಅಭ್ಯಾಸ ಮಾಡಬೇಕು ಎಂದು ಸಲಹೆಯಿತ್ತರು.

ಸಂಸ್ಕೃತ ಈ ದಿನಮಾನಗಳಲ್ಲಿ ಅನ್ನ ಕೊಡುವ ಭಾಷೆ ಆಗದೇ ಇರಬಹುದು. ಈ ಭಾಷೆ ಕಲಿಯುವುದರಿಂದ ಶ್ರೀಮಂತಿಕೆ ಜಾಸ್ತಿಯಾಗುತ್ತದೆ. ನಮ್ಮ ಸಂಸ್ಕೃತಿಯ ಬಗ್ಗೆ ನಿಜವಾದ ಪರಿಚಯವಾಗುತ್ತದೆ, ನನಗೂ ಸಂಸ್ಕೃತ ಕಲಿಯಲಿಲ್ಲ ಎಂಬ ಕೊರಗು ಇಂದಿಗೂ ಇದೆ, ಮತ್ತೆ ಸಂಸ್ಕೃತ ಕಲಿಯಲು ಆರಂಭಿಸುತ್ತೇನೆ.

ಎಸ್.ಸುರೇಶ್‌ಕುಮಾರ್, ಶಿಕ್ಷಣ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net