ಕಾಶಿ ಜಗದ್ಗುರುಗಳ ಕಾರ್ಯಕ್ಕೆ ಹರ್ಷ, ಕೆಳದಿ ಅರಸರ ಶಾಸನ ರಕ್ಷಣೆ

IMG_20240521_200555_861.jpg
Published on

ಹುಬ್ಬಳ್ಳಿ: ಉತ್ತರಪ್ರದೇಶದ ವಾರಾಣಸಿ ಹತ್ತಿರ ನಿರ್ಲಕ್ಷ್ಯಕ್ಕೊಳಗಾಗಿದ್ದ ಕೆಳದಿ ಅರಸರ ಕಾಲದ ಕನ್ನಡ ಶಾಸನದ ರಕ್ಷಣೆಗೆ ಕಾಶೀ ಜ್ಞಾನಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಸೂಕ್ತ ಕ್ರಮ ಕೈಗೊಂಡಿರುವುದು ಸಂಶೋಧನಾ ಸಾಹಿತ್ಯಾಸಕ್ತರಲ್ಲಿ ಹರ್ಷವನ್ನುಂಟು ಮಾಡಿದೆ.

ಕಾಶೀ ನಗರದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಕಪಿಲಧಾರಾ ಎಂಬ ಗ್ರಾಮದಲ್ಲಿ ಕೆಳದಿ ಅರಸರು ಪಂಚಕ್ರೋಶಿ ಯಾತ್ರಾಥಿರ್ಗಳ ಅನುಕೂಲಕ್ಕಾಗಿ ಕಟ್ಟಿಸಿರುವ ಸರೋವರದ ಬಳಿ ಕನ್ನಡದ ಈ ಶಾಸನವಿದೆ. ಕೆಳದಿ ರಾಜ ಶಿವಪ್ಪನಾಯಕರು ಸರೋವರ ನಿಮಿರ್ಸಿರುವ ಮಾಹಿತಿ ಶಾಸನದಲ್ಲಿ ಕಂಡು ಬಂದಿದೆ.

ರಕ್ಷಣೆಗೆ ಕ್ರಮ:
ಕಪಿಲಧಾರಾ ಗ್ರಾಮದ ಜನತೆ ಈ ಶಾಸನದ ಮಹತ್ವ ಅರಿಯದೇ ಸರೋವರದ ದಡದಲ್ಲಿ ಸಂಪರ್ಕ ಸೇತುವೆಯಂತೆ, ಜತೆಗೆ ಬಟ್ಟೆ ತೊಳೆಯಲು ಶಾಸನದ ಈ ಶಿಲೆಯನ್ನು ಬಳಸುತ್ತಿರುವದು ಗಮನಕ್ಕೆ ಬಂದ ತಕ್ಷಣ ಕಾಶೀ ಜಗದ್ಗುರುಗಳು ಅದರ ರಕ್ಷಣೆಗೆ ಮುಂದಾದರು.

ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಶ್ರೀಪಿಠದ ವ್ಯವಸ್ಥಾಪಕ ಶಿವಾನಂದ ಹಿರೇಮಠ ಹಾಗೂ ವಕೀಲರಾದ ಉದಯಭಾನು ಸಿಂಹ ಅವರನ್ನು ಸ್ಥಳಕ್ಕೆ ಕಳುಹಿಸಿ ವಸ್ತುಸ್ಥಿತಿಯನ್ನು ಅವಲೋಕಿಸಿದ್ದಾರೆ.

ಈ ಸರೋವರ ಇರುವ ಜಾಗವು ಕಪಿಲಧಾರಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತಿದ್ದು, ಅಲ್ಲಿಯ ಅನುಮತಿ ಪಡೆದು ಶಾಸನವನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ ಪ್ರವಾಸಿಗರಿಗೆ ಪ್ರದರ್ಶನಕ್ಕಿಡಲು ಮೂಲತಃ ಅಪ್ಪಟ ಕನ್ನಡಿಗರೇ ಆಗಿರುವ ಕಾಶೀ ಜಗದ್ಗುರುಗಳು ಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net