

ಮಾಗಡಿ: ತಾಲೂಕಿನ ಬಸವನಪಾಳ್ಯದಲ್ಲಿ ರಸ್ತೆ ಕಾಮಗಾರಿ ಭೂಮಿಪೂಜೆಗೆ ಆಗಮಿಸಿದ್ದ ಶಾಸಕರ ಎದುರೇ ಕಾಂಗ್ರೆಸ್ - ಜೆಡಿಎಸ್ ಕಾರ್ಯಕರ್ತರ ನಡುವೆ ಗದ್ದಲ ಏರ್ಪಟ್ಟು, ಪರಸ್ಪರ ಕೈ ಕೈ ಮಿಲಾಯಿಸಿದ ಪ್ರಸಂಗ ಸೋಮವಾರ ನಡೆಯಿತು.
ಭೂಮಿಪೂಜೆಗೆ ಮುನ್ನ ಗ್ರಾಮದ ದೇವಾಲಯದಲ್ಲಿ ಶಾಸಕ ಎ.ಮಂಜುನಾಥ್ ಪೂಜೆ ಸಲ್ಲಿಸುವ ವೇಳೆ ಬಸವನಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ದೂರು ನೀಡಿ ಡೇರಿ ಕಾರ್ಯದರ್ಶಿಯನ್ನು ವಜಾಗೊಳಿಸಲು ಕಾರಣರಾದ ಬಾಳೇನಹಳ್ಳಿ ರಾಜಣ್ಣ ಶಾಸಕರ ಜತೆ ಇದ್ದುದನ್ನು ನೋಡಿ ಆಕ್ರೋಶಗೊಂಡ ಕಾರ್ಯದರ್ಶಿ, ಗ್ರಾಮದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಗ್ರಾಮಕ್ಕೆ ಸಂಬಂಧಪಡದ ರಾಜಣ್ಣ ಇಲ್ಲಿಗೆ ಏಕೆ ಬರಬೇಕು ಎಂದು ಶಾಸಕರನ್ನು ಪ್ರಶ್ನಿಸಿದರು. ಈ ವೇಳೆ ಗ್ರಾಪಂ ಮಾಜಿ ಸದಸ್ಯ ಹಾರೋಹಳ್ಳಿ ಮೂರ್ತಿ ಈ ಸಂದರ್ಭದಲ್ಲಿ ಕೂಗಾಟ ಬೇಡ ಎಂದಾಗ ಯುವಕನೊಬ್ಬ ಮೂರ್ತಿಯವರ ಕೊರಳಪಟ್ಟಿ ಹಿಡಿದು ಎಳೆದಾಡಿದ. ಆಗ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು, ಮುಖಂಡರ ನಡುವೆ ಪರಸ್ಪರ ಗದ್ದಲ ಏರ್ಪಟ್ಟು ಕೈಕೈ ಮಿಲಾಯಿಸಿದರು. ಈ ವೇಳೆ ಶಾಸಕರ ಶರ್ಟ್ ಹರಿದುಹೋಗಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಎರಡೂ ಪಕ್ಷಗಳ ಹಿರಿಯ ನಾಯಕರು ಪರಿಸ್ಥಿತಿ ತಿಳಿಗೊಳಿಸಿದ ನಂತರ ಶಾಸಕ ಮಂಜುನಾಥ್ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ತೆರಳಿದರು.
ವಿಷಯ ತಿಳಿದು ಗ್ರಾಮಕ್ಕೆ ತೆರಳಿದ ಪಿಎಸ್‌ಐ ವೆಂಕಟೇಶ್ ಮತ್ತು ಸಿಬ್ಬಂದಿ ಜನರನ್ನು ಚದುರಿಸಿ, ವಜಾಗೊಂಡಿರುವ ಡೇರಿ ಕಾರ್ಯದರ್ಶಿ ಕುಮಾರ್ ಇತರರನ್ನು ವಶಕ್ಕೆ ಪಡೆದರು. ಎರಡೂ ಕಡೆಯವರು ಮಾಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದ್ವೇಷ ರಾಜಕಾರಣ ಮಾಡುವ ರಾಜಕಾರಣಿ ನಾನಲ್ಲ. ಕಳೆದ 25 ವರ್ಷದಿಂದ ಗ್ರಾಮಕ್ಕೆ ರಸ್ತೆ ಇರಲಿಲ್ಲ. ಚುನಾವಣೆ ವೇಳೆ ಗ್ರಾಮಸ್ಥರಿಗೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಇಂದು ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲು ಬಂದಾಗ ಕೆಲವರು ಉದ್ದೇಶಪೂರ್ವಕವಾಗಿ ನನ್ನ ಹಾಗೂ ಪಕ್ಷದ ಕಾರ್ಯಕರ್ತರ ಮೇಲೆ ಗಲಾಟೆ ಮಾಡಿದ್ದಾರೆ. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದೇನೆ. ಎ. ಮಂಜುನಾಥ್ ಶಾಸಕ ಶಾಸಕರೂ ಸಹ ಗಲಾಟೆಗೆ ಆಸ್ಪದ ನೀಡದೆ ಬುದ್ದಿವಂತಿಕೆಯಿಂದ ಪರಿಸ್ಥಿತಿ ತಿಳಿಗೊಳಿಸಬೇಕಾಗಿತ್ತು. ಶಾಸಕರೇ ಗಲಾಟೆಗೆ ಪ್ರೇರೇಪಿಸಿದಾಗ ಬೇರೆಯವರು ಸುಮ್ಮನಿರಲು ಸಾಧ್ಯವೆ. ಪೊಲೀಸರು ಶಾಸಕರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಬೇಕು. ಗಲಾಟೆ ನಿಲ್ಲಿಸಲು ಮುಂದಾದವರ ವಿರುದ್ಧವೇ ಶಾಸಕರು ದೂರು ನೀಡಿರುವುದು ಎಷ್ಟು ಸರಿ. ಎಚ್.ಸಿ. ಬಾಲಕೃಷ್ಣ ಮಾಜಿ ಶಾಸಕ