

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ತನ್ನ ವೈಫಲ್ಯ ಮುಚ್ಚಿಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರ, ಕೇಂದ್ರದ ಸರ್ಕಾರದ ಬಗ್ಗೆ ಪತ್ರಿಕೆಗಳಲ್ಲಿ ನಕಾರಾತ್ಮಕ ಸಂದೇಶವುಳ್ಳ ಜಾಹೀರಾತು ನೀಡಿದೆ. ರಾಜ್ಯದ ರೈತರಿಗೆ, ಯುವಕರಿಗೆ, ಮಹಿಳೆಯರಿಗೆ ಮೋಸ ಮಾಡಿ ಚೊಂಬು ಕೊಟ್ಟಿರುವುದೇ ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥ ನಾರಾಯಣ ಟೀಕಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ವಿಧಾನಸಭೆ ಚುನಾವಣೆ ಪೂರ್ವ ಮಾಸಿಕ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿ ಬಳಿಕ 80 ಯೂನಿಟ್ಗೆ ಸೀಮಿತಗೊಳಿಸಿ ರಾಜ್ಯದ ಜನತೆಗೆ ಚೊಂಬು ಕೊಟ್ಟಿದ್ದು ಯಾರು? ಶಕ್ತಿ ಯೋಜನೆಯಡಿ ಉಚಿತ ಪ್ರಯಾಣವನ್ನು ಕೆಂಪು ಬಸ್ಗೆ ಸೀಮಿತಗೊಳಿಸಿ ಮಹಿಳೆಯರಿಗೆ ಚೊಂಬು ಕೊಟ್ಟಿದ್ದು ಯಾರು ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಮಾಸಿಕ 6 ಸಾವಿರ ರೂ. ಧನ ಸಹಾಯ ನೀಡುತ್ತಿದೆ. ಅದಕ್ಕೆ ಯಡಿಯೂರಪ್ಪ ಅವರು 2019ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರದಿಂದ ಮಾಸಿಕ 4 ಸಾವಿರ ಹೆಚ್ಚುವರಿ ಧನ ಸಹಾಯ ನೀಡಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇದನ್ನು ಸ್ಥಗಿತ ಮಾಡಿ ರೈತರಿಗೆ ಚೊಂಬು ಕೊಟ್ಟಿದೆ. ಭರವಸೆಯಂತೆ ಪಡಿತರದಾರರಿಗೆ 10 ಕೆಜಿ ಅಕ್ಕಿ ನೀಡದೆ ಚೊಂಬು ಕೊಟ್ಟಿದ್ದು ಯಾರು? ಶಿಷ್ಯ ವೇತನ ನಿಲ್ಲಿಸಿ 11 ಲಕ್ಷ ವಿದ್ಯಾರ್ಥಿಗಳಿಗೆ ಚೊಂಬು ಕೊಟ್ಟಿದ್ದು ಯಾರು? ಅಭಿವೃದ್ದಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡದೇ ಚೊಂಬು ಕೊಟ್ಟಿದ್ದು ಯಾರು ಎಂದು ಪ್ರಶ್ನೆ ಮಾಡಿದರು.
ಕೇಂದ್ರ ಸರ್ಕಾರದ 10 ವರ್ಷಗಳ ಸಾಧನೆಯ ರಿಪೋರ್ಟ್ ಕಾರ್ಡ್ಅನ್ನು ಜನತೆಯ ಮುಂದಿಟ್ಟು ನಾವು ಮತ ಕೇಳುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಸಭೆ ಚುನಾವಣೆಯ ಘನತೆಯನ್ನು ಸ್ಥಳೀಯ ಸಂಸ್ಥೆಗಳ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ತಮ್ಮ ಮೂಗಿನ ನೇರಕ್ಕೆ ಚುನಾವಣೆ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ತಮ್ಮ ಸರ್ಕಾರದ 11 ತಿಂಗಳ ಸಾಧನೆಯನ್ನು ಜನತೆಯ ಮುಂದಿಟ್ಟು ಮತ ಕೇಳಲಿ. ಪತ್ರಿಕೆಗಳಲ್ಲಿ ನಕಾರಾತ್ಮಕ ನಿರೂಪಣೆಯ ಜಾಹೀರಾತು ನೀಡುವುದನ್ನು ಬಿಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಬಸವರಾಜ ಕುಂದಗೋಳಮಠ, ದತ್ತಮೂರ್ತಿ ಕುಲಕರ್ಣಿ, ರವಿ ನಾಯ್ಕ ಇದ್ದರು.