ಹುತಾತ್ಮ ಯೋಧನ ಕುಟುಂಬಕ್ಕೆ ಸೈಟ್ ಹಂಚಿಕೆ: ಕರೊನಾ ಸಂಕಷ್ಟದ ಮಧ್ಯೆ ಅಂತಃಕರಣ ಮೆರೆದ ಸಿಎಂ

B S Yeddyurappa
Published on

ಬೆಂಗಳೂರು: ಕರೊನಾ ಸಂಕಷ್ಟದಿಂದಾಗಿ ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ಹುತಾತ್ಮ ಯೋಧನ ಪತ್ನಿಯ ವೇದನೆಭರಿತ ನಿವೇದನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಂದಿಸಿ ಅಂತಃಕರಣ ಮೆರೆದಿದ್ದಾರೆ.

ನಾಗಾಲ್ಯಾಂಡ್​ನಲ್ಲಿ 24 ವರ್ಷದ ಹಿಂದೆ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಮುನಿಯಪ್ಪನ್ ಮೃತಪಟ್ಟಿದ್ದರು. ಮುನಿಯಪ್ಪನ್ ಕುಟುಂಬಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಹಂಚಿಕೆಯಾಗಿದ್ದನ್ನು ಯೋಧನ ಪತ್ನಿ ಎಂ. ದೇವಿ ಅವರಿಗೆ ಪತ್ರ ಬರೆದು ತಿಳಿಸಿರುವ ಸಿಎಂ, ಮಂಜೂರಾತಿ ಪತ್ರವನ್ನು ಕಳುಹಿಸಿದ್ದಾರೆ.

ಸೈನಿಕ ಕಲ್ಯಾಣ ಇಲಾಖೆ ಶಿಫಾರಸಿನಂತೆ ನಿವೇಶನ ಹಂಚಿಕೆಯಾಗಿದೆ. ದೇಶ ಸೇವೆಗೆ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಮುನಿಯಪ್ಪನ್​ಅವರ ತ್ಯಾಗ ಸ್ಮರಣೀಯ ಎಂದು ಬಿಎಸ್​ವೈ ಹೇಳಿದ್ದಾರೆ. ನಿವೇಶನ ಹಂಚಿಕೆಯಾಗದೆ ತಾವು ತೊಂದರೆ ಅನುಭವಿಸುತ್ತಿರುವ ವಿಷಯ ತಿಳಿದು ಬಿಡಿಎ ಅಧಿಕಾರಿಗಳಿಂದ ಮಾಹಿತಿ ತರಿಸಿ ಪರಿಶೀಲಿಸಿದಾಗ ನಿವೇಶನ ಹಂಚಿಕೆಯಾಗಿರುವುದು ತಿಳಿದು ಬಂದಿರುತ್ತದೆ ಎಂದು ತಿಳಿಸಿದ್ದಾರೆ. ತಾವು ಅನಾರೋಗ್ಯಪೀಡಿತವೆಂದು ತಿಳಿದು ಅತ್ಯಂತ ದುಃಖವಾಗಿದೆ. ಭಗವಂತನು ಆಯುರಾರೋಗ್ಯ ನೀಡಿ ರಕ್ಷಿಸಲಿ, ಕುಟುಂಬಕ್ಕೂ ಒಳಿತಾಗಲಿದೆ ಎಂದು ಬಿಎಸ್​ವೈ ಆತ್ಮಸ್ಥೈರ್ಯ ತುಂಬಿದ್ದಾರೆ.

ಭರವಸೆ ನೆನಪಿಸಿದ್ದ ಪತ್ನಿ

ವೀರಯೋಧನ ಪತ್ನಿ ಏ.6ರಂದು ಸಿಎಂಗೆ ಪತ್ರ ಬರೆದು ಕೊಟ್ಟಿದ್ದ ಭರವಸೆ ನೆನಪಿಸಿದ್ದರು. ಹೂ, ಹಣ್ಣು ಮಾರಿಕೊಂಡು ಮೂವರು ಮಕ್ಕಳನ್ನು ಬೆಳೆಸಿದ್ದೇನೆ. ಈಗ ಕ್ಯಾನ್ಸರ್ ಪೀಡಿತಳಾಗಿ 1 ವರ್ಷದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವೆ. ಮೂವರು ಮಕ್ಕಳು ದುಡಿಯುವುದು ಬಿಟ್ಟು ನನ್ನ ಆರೈಕೆಯಲ್ಲಿ ತೊಡಗಿದ್ದಾರೆ. ಕ್ಯಾನ್ಸರ್ ಶ್ವಾಸಕೋಶಕ್ಕೆ ಹರಡಿದೆ. ನಾನು ಕಾಲವಾದ ಬಳಿಕ ಮಕ್ಕಳಿಗಾದರೂ ಸೈಟ್ ಹಂಚಲು ಎಂದು ನಿವೇದಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net