ದೇಶದಲ್ಲಿಲ್ಲ ಷರಿಯಾ ಕಾನೂನು

26 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಇತ್ತೀಚೆಗೆ ವಿಜಯಪುರಕ್ಕೆ ಭೇಟಿ ನೀಡಿದ್ದ ಸಚಿವ ಜಮೀರ್​ ಅಹ್ಮದ್​ಖಾನ್​ 15 ದಿನಗಳಲ್ಲಿ ವಕ್ಫ ಆಸ್ತಿ ನೋಂದಣಿಗೆ ಜಿಲ್ಲಾಡಳಿತವನ್ನು ಒತ್ತಾಯಿಸಿರುವುದರ ಉದ್ದೇಶ ಹಿಂದೂ ರೈತರ ಭೂಮಿಯನ್ನು ಕಿತ್ತುಕೊಂಡು ಅವರನ್ನು ಬೀದಿಪಾಲು ಮಾಡುವುದೇ ಆಗಿದೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಕಿಡಿಕಾರಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಚಿವರ ಈ ಕಿತಾಪತಿಯಿಂದ ತಲತಲಾಂತರದಿಂದಲೂ ಕೃಷಿ ಕಾರ್ಯಗಳನ್ನು ಮಾಡಿಕೊಂಡು ಬಂದಿರುವ ವಿಜಯಪುರ, ಕಲಬುರ್ಗಿ, ಯಾದಗಿರಿ ಜಿಲ್ಲೆಗಳ ರೈತರು ತಮ್ಮ ಜಮೀನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ವಕ್ಫ ಮಂಳಿಯು ವಿಜಯಪುರ ಜಿಲ್ಲೆಯೊಂದರಲ್ಲೇ 15 ಸಾವಿರ ಎಕರೆಗೂ ಅಧಿಕ ಕೃಷಿ ಭೂಮಿಯನ್ನು ಅಕ್ರಮವಾಗಿ ತನ್ನದು ಎಂದು ಘೋಷಣೆ ಮಾಡುತ್ತಿದೆ.

ದೇಶದ ಸಂಸತ್​ ಭವನವೇ ತಮ್ಮದೆಂದು ಹೇಳಿಕೊಂಡು ತಿರುಗುವ ವಕ್ಫ ಮಂಡಳಿ, ಈಗ ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರದ ಕುಮ್ಮಕ್ಕಿನಿಂದ ಬಡ ರೈತರ ಜಮೀನಿನ ಮೇಲೂ ತನ್ನ ವಕ್ರದೃಷ್ಟಿ ಬೀರಿದೆ. ದೇಶದ ಎಲ್ಲ ಆಸ್ತಿಯನ್ನು ವಕ್ಫ ಕಬಳಿಸುತ್ತಿದ್ದರೆ, ಖರ್ಗೆ ಅವರ ಕುಟುಂಬ ವಕ್ಫ ಆಸ್ತಿಯನ್ನೇ ನುಂಗಿ ಹಾಕಿದೆ. ಅಂತಹವರಿಗೆ ನೋಟಿಸ್​ ನೀಡದ ರಾಜ್ಯ ಸರ್ಕಾರ, ಬಡ ರೈತರ ಮೇಲೆ ಏಕಾಏಕಿ ನೋಟಿಸ್​ ನೀಡಿ ದೌರ್ಜನ್ಯ ಎಸಗುತ್ತಿರುವುದು ಖಂಡನೀಯ.

ಹೀಗೆ ತರಾತುರಿಯಲ್ಲಿ ರೈತರ ಭೂಮಿ ಕಿತ್ತುಕೊಂಡು, ವಕ್ಫ ಬೋರ್ಡಿಗೆ ನೀಡಲು ಹೊರಟಿರುವ ಕಾಂಗ್ರೆಸ್​ ಸರ್ಕಾರ ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು. ದೇಶದಲ್ಲಿರುವುದು ಅಂಬೇಡ್ಕರ್​ ವಿರಚಿತ ಸಂವಿಧಾನವೇ ಹೊರತು, ಷರಿಯಾ ಕಾನೂನಲ್ಲ. ಕನ್ನಡ ನಾಡನ್ನೇ ಒಂದು ಸಮುದಾಯಕ್ಕೆ ಮಾರಲು ಹೊರಟಿರುವ ಕಾಂಗ್ರೆಸ್​ ಸರ್ಕಾರಕ್ಕೆ, ಕನ್ನಡಿಗರು ಮತ್ತು ನಾಡಿನ ಅನ್ನದಾತರೇ ತಕ್ಕ ಪಾಠ ಕಲಿಸುವ ದಿನಗಳು ದೂರವಿಲ್ಲ ಎಂದು ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net