ಶೇರ್‌ವೆಲ್ ತಂತ್ರಜ್ಞಾನದಡಿ 5616 ಮನೆ ನಿರ್ಮಾಣ, ಶಾಸಕ ಸೋಮಶೇಖರ್‌ರೆಡ್ಡಿ ಹೇಳಿಕೆ

030220 Mundragi Asshraya Mahatma Gandhi Township
Published on

ಬಳ್ಳಾರಿ: ಟೌನ್‌ಶಿಪ್ ನಿರ್ಮಾಣಕ್ಕೆ 300 ಎಕರೆ ಜಮೀನು ಖರೀದಿಸಲಾಗಿದೆ. ಮೊದಲ ಹಂತದಲ್ಲಿ 96ಎಕರೆ ಪ್ರದೇಶದಲ್ಲಿ ಜಿ+2 ಮಾದರಿಯಲ್ಲಿ ಶೇರ್‌ವೆಲ್ ತಂತ್ರಜ್ಞಾನದಡಿ 5616 ಮನೆ ನಿರ್ಮಿಸಲಾಗುತ್ತಿದೆ ಎಂದು ನಗರ ಶಾಸಕ ಜಿ.ಸೋಮಶೇಖರೆಡ್ಡಿ ಹೇಳಿದರು.

ನಗರದ ಹೊರವಲಯದ ಮುಂಡರಗಿಯ ಮಹಾತ್ಮಗಾಂಧಿ ಟೌನ್‌ಶಿಪ್‌ನ ಜಿ+2 ಆಶ್ರಯ ಮನೆಗಳ ನಿರ್ಮಾಣ ಪ್ರಗತಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದರು. 338.25 ಕೋಟಿ ರೂ.ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ಮನೆಗೆ 6.02ಲಕ್ಷ ರೂ.ವ್ಯಯಿಸಲಾಗುತ್ತಿದೆ. ಎಸ್ಸಿ, ಎಸ್ಟಿ ಫಲಾನುಭವಿಗಳಿಗೆ ರಾಜ್ಯ ಸರ್ಕಾರ 1.80 ಲಕ್ಷ ರೂ.ಸಹಾಯಧನ ನೀಡಲಿದೆ. ಕೇಂದ್ರದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 1.50 ಲಕ್ಷ ರೂ.ಮಂಜೂರಾಗುತ್ತದೆ. ಬ್ಯಾಂಕ್‌ನಿಂದ 1.45 ಲಕ್ಷ ರೂ.ಸಾಲ ಒದಗಿಸಲಾಗುತ್ತಿದೆ. ಉಳಿದ 1.27ಲಕ್ಷ ರೂ.ಹಣವನ್ನು ಫಲಾನುಭವಿಗಳು ಭರಿಸಬೇಕು. ಪಾಲಿಕೆಯಲ್ಲಿ ಎಸ್ಸಿ, ಎಸ್ಟಿಗೆ ಮೀಸಲು ಇರಿಸಿರುವ ಶೇ.25 ಅನುದಾನದಲ್ಲಿ ಸ್ವಲ್ಪ ಹಣ ಬಳಸುವ ನಿಟ್ಟಿನಲ್ಲಿ ಪರಿಶೀಲಿಸಲಾಗುತ್ತಿದೆ. ಇತರೆ ವರ್ಗದ ಫಲಾನುಭವಿಗಳು 1.87 ಲಕ್ಷ ರೂ. ನೀಡಬೇಕು ಎಂದರು. ಮಹಾನಗರ ಪಾಲಿಕೆಯ ಎಇ ಖಾಜಾಹುಸೇನ್, ರಾಬಕೊ ಹಾಲು ಒಕ್ಕೂಟದ ನಿರ್ದೇಶಕ ವೀರಶೇಖರ ರೆಡ್ಡಿ, ಮುಖಂಡರಾದ ಶ್ರೀನಿವಾಸ್ ಮೋತ್ಕರ್, ಪಾಲಣ್ಣ ಇತರರಿದ್ದರು.

ಮಹಾತ್ಮಗಾಂಧಿ ಟೌನ್‌ಶಿಪ್‌ನಲ್ಲಿ 68 ಎಕರೆಯಲ್ಲಿ ಕೌಶಲ ತರಬೇತಿ ಕೇಂದ್ರ, ರಸ್ತೆ, ಯುಜಿಡಿ, ಬಸ್ ನಿಲ್ದಾಣ, ಶಾಲಾ-ಕಾಲೇಜು, ಆಸ್ಪತ್ರೆ, ಉದ್ಯಾನ ಸೇರಿ ಅಗತ್ಯ ಸೌಕರ್ಯ ಕಲ್ಪಿಸಲಾಗುತ್ತಿದೆ. ಅಲ್ಲೀಪುರ ಕೆರೆಯಿಂದ ನೀರಿನ ಸೌಕರ್ಯ ಒದಗಿಸಲಾಗುವುದು. ಮನೆಗಳ ನಿರ್ಮಾಣ ಹೊಣೆಯನ್ನು ನಾಗಾರ್ಜುನ ಕನ್‌ಸ್ಟ್ರಕ್ಷನ್ ಲಿಮಿಟೆಡ್‌ಗೆ ವಹಿಸಿದ್ದು, 2022ರ ಸೆಪ್ಟೆಂಬರ್‌ವರೆಗೆ ಕಾಲಾವಧಿ ನೀಡಲಾಗಿದೆ.| ಸೋಮಶೇಖರ್‌ರೆಡ್ಡಿ ಶಾಸಕ, ಬಳ್ಳಾರಿ ನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net