ರಾಜ್ಯ ರಾಜಧಾನಿಗೆ ಶರಾವತಿ ನೀರು?

Linganamakki
ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರಬಿಟ್ಟಿರುವುದು.
Published on

ಅರವಿಂದ ಅಕ್ಲಾಪುರ ಶಿವಮೊಗ್ಗ
ಜಿಲ್ಲೆಯ ಕಂದಾಯ ಅರಣ್ಯ ಭೂಮಿ ಸಮಸ್ಯೆ ನಡುವೆ ಹೊಸ ಹೋರಾಟಕ್ಕೆ ಕಾರಣವಾಗಿದ್ದು ಶರಾವತಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಪ್ರಸ್ತಾಪ. ಅದರಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿರುವ ಸಂದರ್ಭದಲ್ಲೇ ಈ ಯೋಜನೆ ಪ್ರತಿಧ್ವನಿಸುವುದು ಕುತೂಹಲಕ್ಕೆ ಕಾರಣವಾಗಿದೆ.

ಮೊದಲ ಬಾರಿ ಈ ಯೋಜನೆ ಚರ್ಚೆ ನಡೆದಿದ್ದು 2016ರಲ್ಲಿ. ಅಂದು ಎಂ.ಬಿ.ಪಾಟೀಲ್ ಜಲಸಂಪನ್ಮೂಲ ಸಚಿವರಾಗಿದ್ದರು. ಆರಂಭದಲ್ಲಿ ಲಿಂಗನಮಕ್ಕಿ ಜಲಾಶಯದಿಂದ ಕನಿಷ್ಠ 20 ಟಿಎಂಸಿ ನೀರನ್ನು ಕುಡಿಯುವ ನೀರಿಗಾಗಿ ಬಳಸಿಕೊಳ್ಳುವುದು. ಈ ಪೈಕಿ ಐದು ಟಿಎಂಸಿ ನೀರನ್ನು ಬೆಂಗಳೂರಿಗೆ, ಉಳಿದ 15 ಟಿಎಂಸಿಯನ್ನು ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಬಳಸುವ ಬಗ್ಗೆ ಚರ್ಚೆಗಳು ನಡೆದಿದ್ದವು.
ಮೊದಲ ಬಾರಿ ಈ ಪ್ರಸ್ತಾಪ ಕೇಳಿ ಬಂದಾಗ ಮಲೆನಾಡು ಸಹಜವಾಗಿ ವರ್ತಿಸಿತು. ಇಲ್ಲಿ ಯಾವುದೇ ಪ್ರತಿಭಟನೆಗಳು ನಡೆಯಲಿಲ್ಲ. ಯಾರೂ ಪ್ರತಿಕ್ರಿಯೆ ನೀಡಲಿಲ್ಲ. ಇದೆಲ್ಲ ಕಾರ್ಯಗತವಾಗುವ ಯೋಜನೆಗಳಲ್ಲ ಎಂದು ಕಡೆಗಣಿಸಿದರು. ಆದರೆ 2018ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಮತ್ತೊಮ್ಮೆ ಶರಾವತಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಮಾತು ಬಲವಾಗಿ ಕೇಳಿಬಂತು. ಆಗ ಅದನ್ನು ಮುನ್ನೆಲೆಗೆ ತಂದವರು ಅಂದಿನ ಡಿಸಿಎಂ, ಕಾಂಗ್ರೆಸ್ ನಾಯಕ ಡಾ. ಜಿ.ಪರಮೇಶ್ವರ್. ಅವರು ಇನ್ನೂ ಒಂದು ಹೆಜ್ಜೆ ಮುಂದೆ ಅಧಿಕಾರಿಗಳೊಂದಿಗೆ ಈ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಗಂಭೀರವಾಗಿ ಚರ್ಚಿಸಿದರು.
ಸಭೆ ನಡೆದ ಕೂಡಲೇ ಮಲೆನಾಡಿನ ಮಂದಿ ಎಚ್ಚೆತ್ತುಕೊಂಡರು. ಈ ಯೋಜನೆ ಜಾರಿಗೆ ಬಂದರೆ ಮಲೆನಾಡಿನಲ್ಲಿ ದೊಡ್ಡ ಮಟ್ಟದ ಪರಿಸರ ಅಸಮತೋಲನವಾಗಲಿದೆ ಎಂಬ ಕಾರಣಕ್ಕೆ ಸಂಘಟಿತರಾಗಿ ಹೋರಾಟ ನಡೆಸಿದರು. 2019ರ ಜುಲೈನಲ್ಲಿ ಜಿಲ್ಲೆಯಲ್ಲಿ ನಡೆದ ಬೃಹತ್ ಪ್ರತಿಭಟನೆ ಸರ್ಕಾರಕ್ಕೆ ಬಿಸಿ ಮುಟ್ಟಿಸಿತು. ಅಂದಿನಿಂದ ಈ ಯೋಜನೆ ನಿರ್ಜೀವವಾಗಿತ್ತು. ಈಗ ಮತ್ತೆ ಕಾಂಗ್ರೆಸ್ ಸರ್ಕಾರದಲ್ಲೇ ಇದು ಮುನ್ನೆಲೆಗೆ ಬಂದಿದೆ.
ಆಗಾಗ್ಗೆ ವರದಿ ಪ್ರಸ್ತಾಪ:ಒಂದು ಕಡೆ ಎತ್ತಿನಹೊಳೆ ಯೋಜನೆ ಬಗ್ಗೆ ಪರ-ವಿರೋಧದ ಮಾತುಗಳು ಕೇಳಿಬರುತ್ತಿರುವ ನಡುವೆಯೇ ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ ಮುಂತಾದ ಕುಡಿಯುವ ನೀರಿನ ಸಮಸ್ಯೆಗಳಿರುವ ಜಿಲ್ಲೆಗಳ ಜನರ ದಾಹವನ್ನು ಮಲೆನಾಡಿನ ಶರಾವತಿ ತಣಿಸಬಲ್ಲಳೇ ಎಂಬ ಲೆಕ್ಕಾಚಾರಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ನೀರಿನ ಬರ ಎದುರಿಸುತ್ತಿರುವ ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಿಗೆ ಶರಾವತಿ ನೀರನ್ನು ತೆಗೆದುಕೊಂಡು ಹೋಗುವುದು ಸಾಧ್ಯ ಎಂಬುದನ್ನು ವರದಿಯೊಂದು ದೃಢಪಡಿಸಿತ್ತು. ಈ ಆಧಾರದಲ್ಲಿ ನೀರು ಕೊಂಡೊಯ್ಯುವ ಪ್ರಸ್ತಾಪ ಆಗಾಗ್ಗೆ ಕೇಳಿಬರುತ್ತಿದೆ.
ಲಾಭದ ಲೆಕ್ಕಾಚಾರ:ವಿದ್ಯುತ್ ಉತ್ಪಾದನೆಯನ್ನೇ ಗಮನದಲ್ಲಿರಿಸಿಕೊಂಡು ನಿರ್ಮಾಣವಾಗಿದ್ದು ಲಿಂಗನಮಕ್ಕಿ ಜಲಾಶಯ. ರಾಜ್ಯದಲ್ಲೇ ಹುಟ್ಟಿ ಇಲ್ಲೇ ಸಮುದ್ರ ಸೇರುವ ಶರಾವತಿ ನದಿಗೆ ನೆರೆಯ ರಾಜ್ಯಗಳ ಅಪಸ್ವರವೂ ಇಲ್ಲ. ಹತ್ತು ವರ್ಷಗಳಲ್ಲಿ ಕನಿಷ್ಠ ಆರೇಳು ವರ್ಷವಂತೂ ಲಿಂಗನಮಕ್ಕಿ ಜಲಾಶಯ ಸಂಪೂರ್ಣ ಭರ್ತಿಯಾಗುತ್ತದೆ. ಒಟ್ಟು 180 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಇರುವ ಲಿಂಗನಮಕ್ಕಿ ಜಲಾಶಯದಿಂದ ಕನಿಷ್ಠ 20 ಟಿಎಂಸಿ ನೀರನ್ನು ಕುಡಿಯುವ ನೀರಿಗಾಗಿ ಬಳಸಿಕೊಳ್ಳುವುದು ಸಾಧ್ಯ ಎಂಬ ಅಭಿಪ್ರಾಯವೂ ತಜ್ಞರಿಂದ ಕೇಳಿ ಬಂದಿದೆ.
ಮಲೆನಾಡಿಗರ ವಿರೋಧ ಏಕೆ?:ಲಿಂಗನಮಕ್ಕಿ ಜಲಾಶಯಕ್ಕೆ ಭೂಮಿ ನೀಡಿ ನೆಲೆ ಕಳೆದುಕೊಂಡ ಸಂತ್ರಸ್ತರಿಗೆ ಇನ್ನೂ ಸಂಪೂರ್ಣ ನ್ಯಾಯ ಸಿಕ್ಕಿಲ್ಲ. ಬಹುತೇಕರಿಗೆ ಭೂಮಿ ಹಕ್ಕು ಸಿಕ್ಕಿಲ್ಲ. ಗರಿಷ್ಠ ಪ್ರಮಾಣದ ವಿದ್ಯುತ್ ಉತ್ಪಾದನೆಯಾಗುವ ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆ ಸಮಪರ್ಕವಾಗಿಲ್ಲ. ಅದರಲ್ಲೂ ಹಲವು ವಿದ್ಯುತ್ ಯೋಜನೆಗಾಗಿ ಬದುಕನ್ನು ಕತ್ತಲಿಗೆ ದೂಡಿಕೊಂಡಿರುವ ಹೊಸನಗರ, ಸಾಗರ ತಾಲೂಕಿನ ಗ್ರಾಮೀಣ ಭಾಗದಲ್ಲೂ ಸರಿಯಾಗಿ ವಿದ್ಯುತ್ ಸಂಪರ್ಕವಿಲ್ಲ. ಕುಡಿಯುವ ನೀರು ಸೌಕರ್ಯವೂ ಎಲ್ಲ ಕಡೆ ಇಲ್ಲ. ಜಿಲ್ಲೆಯಲ್ಲಿ ಇಷ್ಟೊಂದು ಸಮಸ್ಯೆಗಳಿರುವಾಗ ಇದನ್ನೆಲ್ಲ ಪರಿಹರಿಸದೆ ರಾಜಧಾನಿಗೆ ನೀರು ಕೊಂಡೊಯ್ಯಲು ಅವಕಾಶ ನೀಡುವುದಿಲ್ಲ ಎಂಬುದು ಸಾಮಾಜಿಕ ಕಾರ್ಯಕರ್ತರ ಸ್ಪಷ್ಟ ನಿಲುವು.
ಪರಿಸರಕ್ಕೂ ಮಾರಕ:ಒಂದೆಡೆ ಜಿಲ್ಲೆಯ ಜನರು ತಮ್ಮ ಹಕ್ಕಿನಿಂದ ಶರಾವತಿಯನ್ನು ಉಳಿಸಿಕೊಳ್ಳಬೇಕೆಂದು ತೀರ್ಮಾನಿಸಿದ್ದರೆ, ಇನ್ನೊಂದೆಡೆ ಈ ಯೋಜನೆ ಕಾರ್ಯಗತವಾದರೆ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂಬುದು ಪರಿಸರಾಸಕ್ತರ ನಿಲುವು. ಈಗಾಗಲೇ ಎತ್ತಿನಹೊಳೆ ಯೋಜನೆಗೆ ಗುಡ್ಡ ಕೊರೆದು, ಕಾಡು ಕಡಿದು ಅನಾಹುತ ಮಾಡಲಾಗಿದೆ. ಅದೇ ಸ್ಥಿತಿ ಮಲೆನಾಡಿನ ಪರಿಸರಕ್ಕೂ ಎದುರಾಗಬಾರದು ಎಂದು ಈಗಾಗಲೇ ಒತ್ತಾಯಗಳು ಕೇಳಿಬಂದಿವೆ. 2019ರಲ್ಲಿ ನಡೆಸಿದ ಹೋರಾಟದ ಮಾದರಿಯಲ್ಲೇ ಮತ್ತೊಂದು ಹೋರಾಟಕ್ಕೆ ಮಲೆನಾಡು ಸಜ್ಜಾಗುತ್ತಿದೆ. ಸರ್ಕಾರ ಈಗಲಾದರೂ ಪರಿಸರಕ್ಕೆ ಮಾರಕವಾದ ಈ ಯೋಜನೆಯನ್ನು ಕೈ ಬಿಡುವುದು ಒಳಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net