ಶರಾವತಿ ಪಂಪ್‌ ಸ್ಟೊರೇಜ್‌ ಯೋಜನೆಯಿಂದ ಹೆಸರಿನ ಪರಿಸರ ನಾಶವಾಗದು ಕೆಪಿಸಿ ಸ್ಪಷ್ಟನೆ

Harnessing Smart Energy Solutions
Published on

ಕಾರವಾರ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಹೆಚ್ಚಿನ ಪರಿಸರ ನಾಶವಾಗದು, ಪರಿಸರವಾದಿಗಳು, ಹೋರಾಟಗಾರರು ಮಾತ್ರವಲ್ಲದೆ ಸ್ಥಳೀಯರಿಗೂ ಯಾವುದೇ ಆತಂಕ ಬೇಡ ಎಂದು ಕೆಪಿಸಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕ ಸರ್ಕಾರದಿಂದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಮೂಲಕ ಪಂಪ್ ಸ್ಟೋರೇಜ್ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯು ಪ್ರಸ್ತುತ ಇರುವ ಶರಾವತಿ ಜಲವಿದ್ಯುತ್ ಯೋಜನಾ ವ್ಯಾಪ್ತಿಯೊಳಗಡೆಯೇ ಬರುತ್ತದೆ.ಯೋಜನೆಗಾಗಿ 60 ವರ್ಷ ಹಿಂದೆ ಕಟ್ಟಿಸಿದ ತಳಕಳಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪ ಜಲಾಶಯಗಳನ್ನೇ ಬಳಕೆ ಮಾಡಲಾಗುತ್ತಿದ್ದು, ಹೊಸ ಜಲಾಶಯ ನಿರ್ಮಾಣ ಮಾಡುತ್ತಿಲ್ಲ. ಹೀಗಾಗಿ ಯಾವುದೇ ಪ್ರದೇಶ ಮುಳುಗಡೆಯಾಗುವುದಿಲ್ಲ.

ಹೊಸ ಜಲಾಶಯಗಳನ್ನು ನಿರ್ಮಾಣ ಮಾಡದೇ ಇರುವುದರಿಂದ ನದಿ ನೀರಿನ ಹರಿವಿನಲ್ಲಿ ಯಾವುದೇ ಮಾರ್ಪಾಟು ಇರುವುದಿಲ್ಲ. ಯೋಜನೆಗೆ 0.37 ಟಿಎಂಸಿ ನೀರು ಅಗತ್ಯವಿದ್ದು, ಈ ನೀರನ್ನು ಮರುಬಳಕೆ ಮಾಡುವುದರಿಂದ ಅಣೆಕಟ್ಟೆಯ ಕೆಳಭಾಗದ ಜನರಿಗೆ ನೀರಿನ ವಿಚಾರದಲ್ಲಿ ಯಾವುದೇ ಅನಾನುಕೂಲ ಆಗುವುದಿಲ್ಲ. ಅಲ್ಲದೆ, ಇಲ್ಲಿನ ನೀರನ್ನು ಬೇರೆಡೆ ಕೊಂಡೊಯ್ಯುವುದೂ ಇಲ್ಲ.

2000 ಮೆಗಾವಾಟ್ ವಿದ್ಯುತ್ ಶೇಖರಣಾ ಯೋಜನೆಯನ್ನು ಕೇವಲ 54.155 ಹೆಕ್ಟೇರ್ ವ್ಯಾಪ್ತಿಯ ಅರಣ್ಯ ಪ್ರದೇಶ ಮತ್ತು 24.31 ಹೆಕ್ಟೇರ್ ಖಾಸಗಿ ಭೂಮಿಗೆ ಮಿತಿಗೊಳಿಸಿ ನಿರ್ವಹಿಸಲಾಗುತ್ತಿದೆ. ಬಹುಪಾಲು ರಚನೆಗಳು ಸುರಂಗದ ಒಳಗೆ ಇರುವುದರಿಂದ ಭೂಮಿಯ ಮೇಲ್ಮನಲ್ಲಿ ಕನಿಷ್ಠ ಪರಿಣಾಮ ಉಂಟಾಗುತ್ತದೆ. 54.155 ಹೆಕ್ಟೇರ್ ಅರಣ್ಯಭೂಮಿ ಪೈಕಿ ಭೂಮಿಯ ಒಳಭಾಗದಲ್ಲಿ 19.982 ಹೆಕ್ಟೇರ್ ಭೂಮಿ ಬರುತ್ತದೆ. ಮೇಲ್ಮೈನಲ್ಲಿ  ಕೇವಲ 34.173 ಹೇಕ್ಟೇರ್ ಮಾತ್ರ ಬಳಸಿಕೊಳ್ಳಲಾಗುತ್ತದೆ. ಯೋಜನಾ ವ್ಯಾಪ್ತಿಯಲ್ಲಿ ಬರುವ ಮರಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಅಗತ್ಯವಿರುವಷ್ಟ್ಟು ಮಾತ್ರ ಮರಗಳನ್ನು ಕಡಿಯಲಾಗುತ್ತದೆ.

ಯೋಜನೆಗೆ ಈಗಾಗಲೇ ಕೇಂದ್ರ ವಿದ್ಯುತ್ ಪ್ರಾಽಕಾರ ಅನುಮತಿ ನೀಡಿದೆ. ಅನುಮತಿ ನೀಡುವ ಮೊದಲು 13 ನಿರ್ದೇಶನಾಲಯಗಳಿಂದ ಅಭಿಪ್ರಾಯ ಸಂಗ್ರಹಣೆ ಮಾಡಿತ್ತು. ಯೋಜನೆಯಿಂದ ಭೂಕುಸಿತ, ಭೂಕಂಪದಂತಹ ಅಪಾಯಗಳು ಉದ್ಭವವಾಗುವುದಿಲ್ಲ, ಜೀವ ವೈವಿದ್ಯತೆಗೆ ಸಮಸ್ಯೆಯಾಗುವುದಿಲ್ಲ, ಭೂಮಿಯ ಸ್ಥಿರತೆ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂಬ ಬಗ್ಗೆ ನಿರ್ದೇಶನಾಲಯಗಳು ನೀಡಿದ ಬಳಿಕವೇ ಯೋಜನೆಗೆ ಅನುಮತಿ ನೀಡಲಾಗಿದೆ.

ಈಗಾಗಲೇ ವನ್ಯ ಜೀವಿಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿದ್ದಲ್ಲದೆ, ರಚನಾತ್ಮಕವಾಗಿ ಭೂಮಿಯ ಸ್ಥಿರತೆಗೆ ಯಾವುದೇ ಧಕ್ಕೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಇದರ ಆಧಾರದ ಮೇಲೆ ವನ್ಯಜೀವಿ ಇಲಾಖಾಧಿಕಾರಿಗಳು ಪ್ರತ್ಯೇಕವಾಗಿ ಪರಿಶೀಲಿಸಿದ ಬಳಿಕ ಯೋಜನೆಯನ್ನು ವನ್ಯಜೀವಿ ಮಂಡಳಿ ಮುಂದೆ ಮಂಡಿಸಲಾಗಿತ್ತು. ಈ ಎಲ್ಲ ಅಂಶಗಳನ್ನು ಪರಿಗಣಿಸಿದ ಬಳಿಕ ರಾಜ್ಯ ವನ್ಯಜೀವಿ ಮಂಡಳಿ ಮತ್ತು ಕೇಂದ್ರ ವನ್ಯಜೀವಿ ಮಂಡಳಿಗಳು ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿವೆ.

ಇದಲ್ಲದೆ ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ಮತ್ತು ಭೂಕಂಪ ಶಾಸ್ತ್ರದ ರಾಷ್ಟ್ರೀಯ ಕೇಂದ್ರ ನಿಯಮದಂತೆ ಸುರಂಗದಲ್ಲಿ ತಡೆಗೋಡೆಗಳನ್ನು ನಿರ್ಮಿಸುವುದರಿಂದ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದಿಲ್ಲ.ಯೋಜನೆ ಅನುಷ್ಠ್ಠಾನ ಸಂದರ್ಭದಲ್ಲಿ ಅರಣ್ಯ ಇಲಾಖೆ, ಅರಣ್ಯ ಸಚಿವಾಲಯ, ಪರಿಸರ ಇಲಾಖೆಗಳು ನಿಗದಿಪಡಿಸುವ ಮಾನದಂಡದಡಿ ಕಾರ್ಯಾಚರಣೆ ನಡೆಸಲಾಗುತ್ತದೆ. ಪಂಪ್ ಸ್ಟೋರೇಜ್ ಯೋಜನೆಗಳಿಂದ ಪರಿಸರ ಸೂಕ್ಷ್ಮ ಪ್ರದೇಶದ ಮೇಲೆ ಹೆಚ್ಚಿನ ದುಷ್ಪರಿಣಾಮ ಉಂಟಾಗುವುದಿಲ್ಲ ಎಂಬುದನ್ನು ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಮಂತ್ರಾಲಯ ಈಗಾಗಲೇ ಸ್ಪಷ್ಟ್ಟಪಡಿಸಿದೆ. ನವೀಕರಿಸಬಹುದಾದ ಇಂಧನವೇ ಭವಿಷ್ಯದ ಇಂಧನವಾಗುತ್ತಿರುವುದರಿಂದ ಪಂಪ್ ಸ್ಟೋರೇಜ್ ಯೋಜನೆಗಳು ಅತ್ಯವಶ್ಯಕ ಎಂದು ಕೆಪಿಸಿ ಅಽಕಾರಿ ಪ್ರತಿಪಾದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net