

ಶಿವಮೊಗ್ಗ: ಶರಾವತಿ ಸಂತ್ರಸ್ತರು ಹಾಗೂ ವಿಐಎಸ್‌ಎಲ್ ಸಮಸ್ಯೆ ಕಾಂಗ್ರೆಸ್ ಪಾಪದ ಕೂಸು. ದೀರ್ಘ ಕಾಲ ಆಡಳಿತದಲ್ಲಿದ್ದ ಕಾಂಗ್ರೆಸ್ ಈ ಸಮಸ್ಯೆಗಳಿಗೇಕೆ ಪರಿಹಾರ ಕಂಡುಕೊಳ್ಳಲಿಲ್ಲ? ಶರಾವತಿ ಸಂತ್ರಸ್ತರ ಭೂಹಂಚಿಕೆ ವಿಚಾರ ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಯಾರು ಕಾರಣ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಪ್ರಶ್ನಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಐಎಸ್‌ಎಲ್‌ಗೆ ಕೊನೆಯ ಮೊಳೆ ಹೊಡೆದವರ‌್ಯಾರು? ಅದನ್ನು ಇನ್ನೂ ಮುಚ್ಚದಂತೆ ನೋಡಿಕೊಂಡಿರುವುದೇ ನಮ್ಮ ಹೆಗ್ಗಳಿಕೆ. ನಿರಾಧಾರವಾಗಿ ಟೀಕೆ ಮಾಡುವ ಮುನ್ನ ಜಿಲ್ಲಾ ಉಸ್ತುವಾರಿ ಸಚಿವರು ಎಚ್ಚರಿಕೆ ವಹಿಸಬೇಕು. ಮನಬಂದಂತೆ ಮಾತನಾಡಿದರೆ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಸದನಾಗಿ ನನ್ನ ಕೆಲಸ ನಾನು ಮಾಡುತ್ತೇನೆ. ಸಚಿವರಾಗಿ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಜಿಲ್ಲೆಗೆ ಅನುದಾನ ತನ್ನಿ. 5 ಕೋಟಿ ರೂ. ವೆಚ್ಚದಲ್ಲಿ ಫ್ರೀಡಂ ಪಾರ್ಕ್ ಅಭಿವೃದ್ಧಿಗೆ ಗುದ್ದಲಿ ಪೂಜೆ ಮಾಡಿದ್ದೀರಿ. ಇದನ್ನು ಬಿಟ್ಟರೆ ಜಿಲ್ಲೆಗೆ ನಿಮ್ಮ ಕೊಡುಗೆಯೇನು? ಜನಪ್ರತಿನಿಧಿಯಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿಯಾಗಿ ಶರಾವತಿ ಸಂತ್ರಸ್ತರ ಭೂ ಹಂಚಿಕೆ ವಿಚಾರವನ್ನು ಚರ್ಚಿಸಿದ್ದೇನೆ. ಇದರಿಂದ ನಿಮಗೇನು ಕಷ್ಟ? ಆನೆ ಹಾವಳಿ ನಿಯಂತ್ರಣಕ್ಕೆ ಒತ್ತಾಯಿಸಿ ನಮ್ಮ ಶಾಸಕರು, ಜನರ ಪರವಾಗಿ ಪ್ರತಿಭಟನೆ ನಡೆಸಿದರೆ ನಿಮಗೆ ತೊಂದರೆಯೇನು ಎಂದು ಬಿವೈಆರ್ ಪ್ರಶ್ನಿಸಿದರು.