‘ಶರಾವತಿ ಆರತಿ’ ಕಾರ್ಯಕ್ರಮ 7ರಂದು

Sharavati
Published on

ಹೊನ್ನಾವರ: ಜೀವನದಿ ಶರಾವತಿಗೆ ಕೃತಜ್ಞತಾಪೂರ್ವಕವಾಗಿ ದೀಪಾರತಿ ಎತ್ತುವ ‘ಶರಾವತಿ ಆರತಿ’ ಕಾರ್ಯಕ್ರಮವನ್ನು ಏ. 7ರಂದು ಸಂಜೆ 5:30ಕ್ಕೆ ಪಟ್ಟಣದ ಬಂದರು ಪ್ರದೇಶದ ಶರಾವತಿ ತೀರದಲ್ಲಿ ಆಯೋಜಿಸಲಾಗಿದೆ ಎಂದು ಶರಾವತಿ ಆರತಿ ಸಮಿತಿ ಅಧ್ಯಕ್ಷ ವೆಂಕಟ್ರಮಣ ಹೆಗಡೆ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು, ಆದಿಚುಂಚನಗಿರಿ ಶಾಖಾಮಠದ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹೊರನಾಡು ಕ್ಷೇತ್ರದ ಧರ್ಮಕರ್ತ ಭೀಮೇಶ್ವರ ಜೋಶಿ ಕಾರ್ಯಕ್ರಮ ಉದ್ಘಾಟಿಸುವರು. ಬಂದರಿನ ಮಾರುತಿ ಮಂದಿರದಿಂದ ಮೆರವಣಿಗೆ ನಡೆಯಲಿದೆ. ತಾರಾ ಭಟ್ ಬಳಗದಿಂದ ಭಕ್ತಿ ಸಂಗೀತ ನಡೆಯಲಿದೆ ಎಂದರು.

ಸಮಿತಿಯ ಕಾರ್ಯಾಧ್ಯಕ್ಷ ಜಿ.ಜಿ. ಶಂಕರ ಮಾತನಾಡಿ, ಶರಾವತಿ ನದಿಯು ಕುಡಿಯಲು ನೀರು, ಮೀನುಗಾರಿಕೆ, ಮರಳುಗಾರಿಕೆ, ಪ್ರವಾಸೋದ್ಯಮ ಸೇರಿ ವಿವಿಧ ಉದ್ಯೋಗದ ಮೂಲಕ ಹಲವರಿಗೆ ಜೀವನಾಧಾರವಾಗಿದೆ. ಸಾವಿರಾರು ಜನರು ಈ ನದಿಯನ್ನು ನಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಆದರೆ, ಇತ್ತೀಚೆಗೆ ಶರಾವತಿ ನದಿಯ ನೀರನ್ನು ಬೆಂಗಳೂರು ಮತ್ತಿತರ ಕಡೆಗೆ ಒಯ್ಯುವ ಯೋಜನೆ ಪ್ರಸ್ತಾಪವಾಗಿದ್ದು ಇದರಿಂದ ನದಿಗೆ ತೊಂದರೆಯಾಗಲಿದೆ. ಈ ಯೋಜನೆಯನ್ನು ಸಮಿತಿಯು ವಿರೋಧಿಸುತ್ತದೆ. ದೀಪಾರತಿ ಬೆಳಗುವ ಮೂಲಕ ಶರಾವತಿಗೆ ನಮನ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಎಲ್ಲರೂ ಭಾಗವಹಿಸಬೇಕು ಎಂದು ಕೋರಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ನಾಯಕ ಮಾತನಾಡಿ, ಶರಾವತಿ ನದಿ ಸ್ವಚ್ಛತೆ ಬಗ್ಗೆ ಜಾಗೃತಿ ಇರಲಿಲ್ಲ. ಕಲ್ಮಶ ಎಸೆದು ಮಲೀನ ಮಾಡುತ್ತಿದ್ದಾರೆ. ನದಿಯ ಸ್ವಚ್ಛತೆ ಕುರಿತು ಜನಜಾಗೃತಿ ಉದ್ದೇಶದಿಂದ ಗಂಗಾರತಿ ಮಾದರಿಯಲ್ಲಿಯೇ ಶರಾವತಿ ಆರತಿ ಮಾಡುತ್ತಿದ್ದೇವೆ. ಎಲ್ಲ ಸಮಾಜಕ್ಕೆ ಸಂಬಂಧಿಸಿದ ಮತ್ತು ಎಲ್ಲರೂ ಸೇರಿ ನಡೆಸುವ ಕಾರ್ಯಕ್ರಮ ಇದಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ಎಂ.ಎಸ್. ಹೆಗಡೆ, ಸಂಜೀವ ಶೇಟ್, ಡಾ. ಜಿ.ಪಿ. ಪಾಠಣಕರ, ಸುರೇಶ ಹೊನ್ನಾವರ, ರಾಜೇಶ ಸಾಳೆಹಿತ್ತಲ್, ಲೋಕೇಶ ಮೇಸ್ತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net