

ಶಿವಮೊಗ್ಗ: ಶರಾವತಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಮುಳುಗಡೆ ಸಂತ್ರಸ್ತರಿಗೆ ಇನ್ನೂ ಸರಿಯಾದ ಪುನರ್ವಸತಿ ಕಲ್ಪಿಸಿಲ್ಲ. ಹೀಗಿರುವಾಗ 400 ಕಿ.ಮೀ. ದೂರದ ಬೆಂಗಳೂರಿಗೆ ನೀರು ಕೊಂಡೊಯ್ಯುವುದು ಅಸಾಧ್ಯದ ಮಾತು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಸ್ಪಷ್ಟಪಡಿಸಿದರು.
ಶರಾವತಿ ನದಿ ನೀರನ್ನು ವಿದ್ಯುತ್ ಉತ್ಪಾದನೆ ಮತ್ತು ಕುಡಿಯುವುದಕ್ಕೆ ಹೊರತಾಗಿ ಬೇರೆ ಉದ್ದೇಶಕ್ಕೆ ಬಳಸುತ್ತಿಲ್ಲ. ಈ ಹಿಂದೆ ಬೆಂಗಳೂರಿಗೆ ನೀರು ಕೊಂಡೊಯ್ಯುವ ಪ್ರಸ್ತಾವನೆ ಬಂದಿತ್ತು. ಅದಕ್ಕೆ ನಮ್ಮ ಪಕ್ಷವೇ ವಿರೋಧ ಮಾಡಿತ್ತು. ಈಗಲೂ ಆ ಪ್ರಸ್ತಾವನೆಗೆ ಯೋಜನಾ ವರದಿ ತಯಾರಿಸುವ ಒಂದು ಚರ್ಚೆ ಆಗಿದೆಯೇ ವಿನಃ ಜಾರಿಗೆ ಬಂದಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
20 ಸಾವಿರ ಕೋಟಿ ರೂ. ವ್ಯಯವಾಗುವ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವುದಿಲ್ಲ. ಈ ಬಗ್ಗೆ ಜಲಸಂಪನ್ಮೂಲ ಸಚಿವ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬಳಿ ಚರ್ಚಿಸಲಾಗಿದೆ. ಯೋಜನೆ ಜಾರಿ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ ಎಂದಿದ್ದಾರೆ. ಬಿಜೆಪಿಯವರು ಮತ್ತು ಕೆಲ ಪರಿಸರವಾದಿಗಳು, ಸಂಘಟನೆಗಳು ಸೇರಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.
ನಿಜವಾಗಿಯೂ ಮುಳುಗಡೆ ಸಂತ್ರಸ್ತರಿಗೆ ಪಾಪ ಎಸಗಿದವರು ಶಾಸಕ ಆರಗ ಜ್ಞಾನೇಂದ್ರ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮತ್ತು ಮಾಜಿ ಸಚಿವ ಹರತಾಳು ಹಾಲಪ್ಪ. ಐದು ವರ್ಷ ಅಧಿಕಾರ ನಡೆಸಿದ ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದು ಶರಾವತಿ ಸಂತ್ರಸ್ತರಿಗೆ ನ್ಯಾಯ ಕೊಡಿಸುವಲ್ಲಿ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಪ್ರಮುಖರಾದ ರಮೇಶ್ ಶಂಕರಘಟ್ಟ, ಸೋಮಶೇಖರ್ ಲ್ಯಾವಿಗೆರೆ, ಜಿ.ಪದ್ಮನಾಭ್, ಶಿ.ಜು.ಪಾಶ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
ಬಿಜೆಪಿ-ಜೆಡಿಎಸ್‌ನಲ್ಲಿ ಗೊಂದಲ ಶುರು
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿಯಲ್ಲಿ ನನಗೆ ಶತ್ರುಗಳಿದ್ದಾರೆ ಅಂದಿದ್ದಾರೆ. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿ-ಜೆಡಿಎಸ್‌ನಲ್ಲಿ ಈಗ ಗೊಂದಲ ಶುರುವಾಗಿದೆ ಎಂದು ಬೇಳೂರು ಹೇಳಿದರು. ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆದ್ದು ತೋರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ತಂಡ ಕಟ್ಟಿಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಇಳಿಸಲು ಹೊರಟಿದ್ದಾರೆ ಎಂದರು.