

ಹುಬ್ಬಳ್ಳಿ: ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ರಾಜಕೀಯ ಪ್ರೇರಿತವಾಗಿದೆ. ರಾಜಭವನ ಬಿಜೆಪಿ ಕಚೇರಿಯಾಗಿ ಪರಿವರ್ತನೆಯಾಗಿದೆ ಎಂದು ಶಾಸಕ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಕುಮಾರ ಬಚ್ಚೇಗೌಡ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಖಂಡರಾದ ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ ಸೇರಿ ಹಲವರ ವಿರುದ್ಧ ದೂರು ಇದ್ದರೂ ಅದನ್ನು ಪರಿಗಣಿಸದೇ ಕೇವಲ ಸಿಎಂ ಮೇಲೆ ಯಾರೋ ದೂರು ಕೊಟ್ಟರೆಂದು ಒಂದೂವರೆ ತಿಂಗಳಲ್ಲಿ ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ಸಿಕ್ಕಸಿಕ್ಕ ದೂರುಗಳನ್ನು ತಗೊಂಡು ಈ ರೀತಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವುದನ್ನು ನೋಡಿದರೆ ಇದೇನು ಕಲಾಸಿಪಾಳ್ಯ ಸ್ಟೇಶನ್ ಆಗಿದೆಯೇ? ಎಂದು ಪ್ರಶ್ನಿಸಿದರು.
ಏನೇ ಆದರೂ ಸಿಎಂ ಅವರ ಬೆನ್ನಿಗೆ ಕಾಂಗ್ರೆಸ್ ಪಕ್ಷ ಇದೆ. ಸುಸ್ಥಿರ ಆಡಳಿತವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೇ ಇದು ನಡೆಯುತ್ತಿದೆ. ಮೊದಲು ಶಾಸಕರನ್ನು ಕೊಂಡುಕೊಳ್ಳಲು ಯತ್ನಿಸಿದರು. ಯಾರೂ ಜಗ್ಗಲಿಲ್ಲ ಎಂದ ಮೇಲೆ ಇಡಿ, ಐಟಿ ವಿಭಾಗಗಳನ್ನು ಬಳಸಿಕೊಂಡರು. ಈಗ ರಾಜಭವನ ಉಪಯೋಗಿಸಿಕೊಳ್ಳುತ್ತಿದ್ದಾರೆ. ಇದು ಕೂಡ ಯಶಸ್ವಿಯಾಗುವುದಿಲ್ಲ. ಸಿಎಂ ರಾಜೀನಾಮೆ ಕೊಡುವ ಪ್ರಸಂಗ ಬರುವುದಿಲ್ಲ ಎಂದರು.
ಮುಡಾ ಪ್ರಕರಣದಲ್ಲಿ ನಿಜವಾದ ಆರೋಪ ಏನು ಎಂಬುದೇ ಗೊತ್ತಿಲ್ಲ. ಇನ್ನು ಅಧಿಕಾರ ರ್ದುಬಳಕೆ ಎಲ್ಲಿಂದ ಬರುತ್ತದೆ? ಡಿನೋಟಿಫಿಕೇಶನ್ ಕ್ರಮಬದ್ಧವಾಗಿದೆ. ಆದರೂ ಸಿಎಂ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ ಎಂದು ಶರತ್ ಹೇಳಿದರು.
ಬಿಜೆಪಿಯವರು ಉಪಚುನಾವಣೆ ಸಂದರ್ಭದಲ್ಲಿ ಆಮೀಷ ಒಡ್ಡಿದ್ದರು. ಆಗ ನಾನು ಓಗೊಡಲಿಲ್ಲ. ಹಾಗಾಗಿ ಈಗ ಮತ್ತೆ ಆಮೀಷ ಒಡ್ಡಿಲ್ಲ ಎಂದು ಉತ್ತರಿಸಿದರು.