

ಬಸವಕಲ್ಯಾಣ: ಕ್ಷೇತ್ರದ ವ್ಯಾಪ್ತಿಯ ಬಸವಕಲ್ಯಾಣ ಮತ್ತು ಹುಲಸೂರು ತಾಲೂಕುಗಳಲ್ಲಿ ಮಳೆಯಿಂದ ಹಲವೆಡೆ ಹೊಲಗಳಲ್ಲಿ ನೀರು ನಿಂತು ಅಪಾರ ಪ್ರಮಾಣದ ಬೆಳೆ ಹಾಳಾಗಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ವಿತರಿಸಬೇಕು ಎಂದು ಶಾಸಕ ಶರಣು ಸಲಗರ ಕೋರಿದ್ದಾರೆ.
ಕಲಬುರಗಿಯಲ್ಲಿ ಸೋಮವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಭೇಟಿಯಾದ ಅವರು, ಕ್ಷೇತ್ರದಲ್ಲಿ ಮುಂಗಾರು ಆರಂಭದಲ್ಲಿ ಸಮರ್ಪಕ ಮಳೆಯಾಗಿಲ್ಲ. ನಂತರ ಬಿದ್ದ ಅಲ್ಪ-ಸ್ವಲ್ಪ ಮಳೆಗೆ ರೈತರು ಬಿತ್ತನೆ ಮಾಡಿದ್ದರು. ಆದರೆ ಇತ್ತೀಚಿನ ನಿರಂತರ ಮಳೆಯಿಂದ ಜಮೀನುಗಳಲ್ಲಿ ನೀರು ನಿಂತು ಸಾಕಷ್ಟು ಪ್ರಮಾಣದಲ್ಲಿ ಬೆಳೆಗಳು ಹಾಳಾಗಿವೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಕೂಡಲೇ ಮುಂದಾಗಬೇಕು ಎಂದರು.
ಕಳೆದ ವರ್ಷದ ಮಳೆಗಾಲದಲ್ಲಿ ಬಸವಕಲ್ಯಾಣ ಕ್ಷೇತ್ರದಲ್ಲಿ ಸುಮಾರು ಸಾವಿರ ಮನೆಗಳು ಬಿದ್ದಿದ್ದವು. ಅಂದಿನ ಬಿಜೆಪಿ ಸರ್ಕಾರ ಸಂಕಷ್ಟದಲ್ಲಿದ್ದವರ ನೆರವಿಗೆ ಧಾವಿಸಿ ಪರಿಹಾರ ವಿತರಿಸಿತ್ತು. ಪ್ರಸಕ್ತ ವರ್ಷವೂ ಸಾಕಷ್ಟು ಮನೆಗಳು ಮಳೆಯಿಂದ ಕುಸಿದಿವೆ. ಅಧಿಕಾರಿಗಳಿಂದ ವರದಿ ಪಡೆದು ನಿರಾಶ್ರಿತರು ಮತ್ತು ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ವಿತರಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಅಧಿಕಾರಿಗಳಿಂದ ವರದಿ ತರಿಸಿಕೊಂಡ ಬಳಿಕ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಲಗರ ತಿಳಿಸಿದ್ದಾರೆ. ಸೂರ್ಯಕಾಂತ ಚಿಲ್ಲಾಬಟ್ಟೆ, ಸಂಜುಕುಮಾರ ಸೂಗುರೆ ಇತರರಿದ್ದರು.