ಕನ್ನಡವನ್ನು ದೇವಭಾಷೆಯನ್ನಾಗಿಸಿದ ಶರಣರು: ಲೇಖಕ ಬನ್ನೂರು ಕೆ.ರಾಜು ಬಣ್ಣನೆ

6
Published on

ಮೈಸೂರು: ಬಸವಾದಿ ಶರಣರು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ಕನ್ನಡದಲ್ಲೇ ವಚನಗಳನ್ನು ರಚಿಸುವ ಮೂಲಕ ಕನ್ನಡವನ್ನು ದೇವಭಾಷೆಯನ್ನಾಗಿಸಿದರು ಎಂದು ಲೇಖಕ ಬನ್ನೂರು ಕೆ.ರಾಜು ಬಣ್ಣಿಸಿದರು.
ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕರಿಗೆ ವಿವಿಧ ಪ್ರಶಸ್ತಿ ಪ್ರದಾನ, ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಹಿತ್ಯ, ಬರಹಗಳು ಹಿಂದೆ ಸಂಸ್ಕೃತದಲ್ಲೇ ಹೆಚ್ಚು ಬರುತ್ತಿದ್ದವು. ಇಂತಹ ಸಾಹಿತ್ಯ ಸಂಸ್ಕೃತ ಕಲಿತವರಿಗೆ, ಒಂದು ವರ್ಗಕ್ಕೆ ಮಾತ್ರ ಅರ್ಥವಾಗುವಂತಿದ್ದವು. ಆದರೆ 12ನೇ ಶತಮಾನದಲ್ಲಿ ಬಸವಾದಿ ಶರಣರು ಜನಸಾಮಾನ್ಯರಿಗೆ ಅದರಲ್ಲೂ ಅವಿದ್ಯಾವಂತರಿಗೂ ಕೇಳಿದ ಕೂಡಲೇ ಅರ್ಥವಾಗುವಂತೆ ಕನ್ನಡದಲ್ಲಿ ವಚನಗಳನ್ನು ರಚಿಸಿದರು. ಇದರಿಂದಾಗಿ ಕನ್ನಡವನ್ನೂ ದೇವಭಾಷೆಯನ್ನಾಗಿ ಜನ ನೋಡುವಂತಾಯಿತು ಎಂದರು.
‘ಸಾರ್ಥಕ ಶರಣ ದಂಪತಿ’ ಪ್ರಶಸ್ತಿಯನ್ನು ಡಾ.ಕೆ.ಲೀಲಾ ಪ್ರಕಾಶ್, ಕೇಶವ ಪ್ರಸಾದ್ ದಂಪತಿ ಸ್ವೀಕರಿಸಿದರು. ಸಮಾಜ ಸೇವೆಗಾಗಿ ನಗರಪಾಲಿಕೆ ಮಾಜಿ ಸದಸ್ಯ ಎಂ.ಪ್ರದೀಪ್‌ಕುಮಾರ್, ವಕೀಲರಾದ ಎಂ.ಪೂರ್ಣಿಮಾ, ಜಿ.ಗೋಪಾಲ್, ಪ್ರಜ್ವಲ್ ರಾಮಣ್ಣ, ಷಡಕ್ಷರಿ ಅವರಿಗೆ ಬಸವ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಪ್ರತಿಷ್ಠಾನದ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ, ವಿಷ್ಣು ಸಾಲಿಗ್ರಾಮ ಗುರೂಜಿ, ನಟ ಸುಪ್ರೀತ್, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಮುಖಂಡರಾದ ನಜರ್‌ಬಾದ್ ನಟರಾಜು, ಟಿ.ಸುರೇಶ್, ಎಂ.ಸುನೀಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net