

ಕೊಳ್ಳೇಗಾಲ: ಬಸವಾದಿ ಶರಣರ ವಚನ ಕೇಳುವುದು ಅಮೃತ ಕುಡಿದಂತೆ ಎಂದು ಕೆಸ್ತೂರು ಮಠದ ತೋಟದಾರ್ಯ ಸ್ವಾಮೀಜಿ ನುಡಿದರು.
ಪಟ್ಟಣದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಅಕ್ಕನ ಬಳಗ ವತಿಯಿಂದ ಸೋಮವಾರ ಆಯೋಜಿಸಿದ್ದ ಅಕ್ಕ ಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶರಣರ ವಚನಗಳು ಜೀವನ ಮೌಲ್ಯ ತಿಳಿಸುತ್ತದೆ. ಈ ವಚನಗಳನ್ನು ಅನುಸರಿಸಿದರೆ ಉತ್ತಮ ಬದುಕು ನಿಮ್ಮದಾಗುತ್ತದೆ. ಈ ಹಿನ್ನೆಲೆಯಲ್ಲಿ ಬಸವಾದಿ ಶರಣ ವಚನಗಳು ಪ್ರತಿ ಮನೆ ಮನೆಗೂ ತಲುಪಬೇಕಿದೆ ಆಶಿಸಿದರು.
ವಿಶೇಷವಾಗಿ ಮಕ್ಕಳಿಗೆ ಶರಣರ ವಚನಗಳನ್ನು ತಿಳಿಸಬೇಕು. ಆಗ ಸದೃಢ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಇಂದು ಅಕ್ಕನ ಬಳಗದಿಂದ 12ನೇ ಶತಮಾನದ ಮಹಾನ್ ವಚನಗಾರ್ತಿ ಅಕ್ಕ ಮಹಾದೇವಿ ಅವರ ಜಯಂತಿ ಆಚರಣೆ ಮಾಡುತ್ತಿರುವುದು ಶ್ಲಾಘನೀಯ. ಅಕ್ಕ ಮಹಾದೇವಿ ಅವರು ಮಹಿಳಾ ವರ್ಗಕ್ಕೆ ಸ್ಫೂರ್ತಿ ಎಂದರು.
ಈ ವೇಳೆ ಅಕ್ಕನ ಬಳಗದ ಪದಾಧಿಕಾರಿಗಳು ಬವಸಣ್ಣ ಹಾಗೂ ಅಕ್ಕ ಮಹಾದೇವಿ ಅವರ ವಚನಗಳನ್ನು ಹಾಡಿದರು. ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ, ಅಕ್ಕನ ಬಳಗದ ತಾಲೂಕು ಅಧ್ಯಕ್ಷೆ ಪುಷ್ಪಾ ಶಾಂತಮಲ್ಲಪ್ಪ, ಕಾರ್ಯದರ್ಶಿ ಪ್ರಮೀಳಾ ನಂಜಪ್ಪ ಹಾಗೂ ಬಳಗದ ಎಲ್ಲ ಪದಾಧಿಕಾರಿಗಳು ಇದ್ದರು.