

ಮೈಸೂರು: ಶರಣರ ವಚನಗಳು ಸಾಹಿತ್ಯದ ದಿಕ್ಸೂಚಿಯಾಗಿವೆೆ. ವಚನ ಸಾಹಿತ್ಯ ಜೀವನ ವಿಧಾನವಾಗಿದೆ ಎಂದು ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಅಭಿಪ್ರಾಯಪಟ್ಟರು.
ಶ್ರೀ ನಟರಾಜ ಪ್ರತಿಷ್ಠಾನ, ಶರಣ ಜ್ಯೋತಿ ಪ್ರಸಾರಾಂಗ, ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯ ಸಹಯೋಗದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಅವರ ಜಯಂತಿ, ‘ಮಹಾಮಾನವತವಾದಿ ಬಸವಣ್ಣ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಚನ ನಾವು ಹೇಗೆ ಬದುಕಬೇಕು ಎಂಬುದನ್ನು ತಿಳಿಸಿಕೊಡುತ್ತದೆ. ಅದನ್ನು ಅಳವಡಿಸಿಕೊಂಡು ಬದುಕಿದರೆ ಜೀವನ ಸಾರ್ಥಕವಾಗುತ್ತದೆ. ಇಂತಹ ಮಹಾನ್ ಚೇತನಗಳ ಅಂಶಗಳನ್ನು ಮೈಗೂಡಿಸಿಕೊಳ್ಳುವುದರಿಂದ ಜೀವನ ಸಾರ್ಥಕ ಎನಿಸುತ್ತದೆ ಎಂದು ಹೇಳಿದರು.
ಬಹುಭಾಷಾ ವಿದ್ವಾಂಸ ಪ್ರೊ.ಆರ್.ವಿ.ಎಸ್.ಸುಂದರಂ ಮಾತನಾಡಿ, ವಚನ ಸಾಹಿತ್ಯ ಎಲ್ಲ ಭಾಷೆಗಳಿಗೂ ಅನುವಾದಬೇಕು. ಆ ಮೂಲಕ ಇಡೀ ಲೋಕಕ್ಕೆ ಪರಿಚಯಿಸಬೇಕು ಎಂದರು.
ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ವಚನ ಸಾಲನ್ನು ಎಲ್ಲರೂ ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಾಗೆಯೇ ಭಾಷೆಯು ಮುತ್ತಿನಂತಿದ್ದರೆ ಎಲ್ಲರೂ ಬಸವಣ್ಣನಂತೆ, ಅಲ್ಲಮಪ್ರಭುವಿನಂತೆ ಆಗಬಹುದು ಎಂದು ಅಭಿಪ್ರಾಯಪಟ್ಟರು.
ಕೃತಿಕಾರ ಹಿರಿಯ ಶಿಲ್ಪಿ ಎಲ್.ಶಿವಲಿಂಗಪ್ಪ ಮಾತನಾಡಿ, ಈ ಕೃತಿ ಚಿತ್ರಗಳ ಮೂಲಕ ಬಸವಣ್ಣನವರ ಬಗ್ಗೆ ತಿಳಿಸುತ್ತದೆ. ಸಾವಿರ ಶಬ್ದಗಳು ಹೇಳುವಂಥದ್ದನ್ನು ಒಂದು ಚಿತ್ರ ಹೇಳುತ್ತದೆ ಎನ್ನುವುದು ಈ ಕೃತಿಯ ವಿಶೇಷ. ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಎನ್ನುವುದನ್ನು ಇಟ್ಟುಕೊಂಡು ಈ ಕೃತಿ ರಚನೆ ಆಗಿರುವುದನ್ನು ನೋಡಬಹುದು.
ಈ ಕೃತಿಯಲ್ಲಿರುವ ಮೂಲ ಅಂಶಗಳಲ್ಲಿ ಪುರಾಣದ ವಿಚಾರಗಳಿವೆ. ಸ್ತ್ರೀಯರಿಗೆ ಸಮಾನತೆಯನ್ನು ನೀಡುವಂತಹ ವಿಚಾರಗಳಿವೆ. ಅನುಭವ ಮಂಟಪದಲ್ಲಿ ನಡೆಯುವಂತಹ ಸಭೆಯ ವಿವರ ಕೂಡ ಈ ಕೃತಿಯಲ್ಲಿ ನೋಡಬಹುದು. ಈ ಕೃತಿಯು ಸರಳ ಭಾಷೆಯಲ್ಲಿ ಸಾಮಾನ್ಯರಿಗೂ ಅರ್ಥವಾಗುವಂತಹ ರೀತಿಯಲ್ಲಿ ಪುಸ್ತಕವನ್ನು ಬರೆಯಲಾಗಿದೆ ಎಂದು ಹೇಳಿದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಶಿವಕುಮಾರ ಸ್ವಾಮಿಗಳು ಸಿದ್ಧಗಂಗೆಯನ್ನು ಕರ್ಮಭೂಮಿ, ತಪೋಭೂಮಿಯನ್ನಾಗಿ ಮಾಡಿಕೊಂಡಿದ್ದರು. ಶ್ರೀಗಳು ಪರರ ಒಳಿತನ್ನು ಬಯಸಿದವರು. 10,000 ಮಕ್ಕಳಿಗೆ ವಿದ್ಯಾಭ್ಯಾಸವನ್ನು ವಸತಿಯ ಜತೆಗೆ ಯಾವುದೇ ಶುಲ್ಕವಿಲ್ಲದೆ ನೀಡಿದವರು. ಅಂತಹ ಮಹಾನ್ ವ್ಯಕ್ತಿಯ ನಡುವೆ ಬದುಕಿದ್ದ ನಾವು ಅವರ ಅಂಶಗಳಲ್ಲಿ ಕೆಲವೊಂದಾದರೂ ರೂಢಿಸಿಕೊಳ್ಳಬೇಕು ಎಂದರು.
ಈ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಮಠಮಾನ್ಯಗಳು ದಾರಿದೀಪವಾಗಿವೆ. ಅನ್ನ, ಅಕ್ಷರ, ಆರೋಗ್ಯವನ್ನು ನೀಡುವ ಕೆಲಸವನ್ನು ಮಠಗಳು ಮಾಡುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಮಹೇಶ್ ದಳಪತಿ, ಸಹ ಪ್ರಾಧ್ಯಾಪಕ ದಿಲೀಪ್, ಸಹಾಯಕ ಪ್ರಾಧ್ಯಾಪಕಿ ವೀಣಾ ಕುಂಚೂರ್ ಇನ್ನಿತರು ಇದ್ದರು.