ಶರಣರ ವಚನ ಸಾಹಿತ್ಯ ಪ್ರಸ್ತುತ ಸಮಾಜಕ್ಕೆ ಮುಖ್ಯ

13 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ವತಂತ್ರ ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಯಶಸ್ವಿ ಆಗಲು ಶರಣರ ವಚನ ಸಾಹಿತ್ಯ ಪ್ರಸ್ತುತ ಸಮಾಜಕ್ಕೆ ಮುಖ್ಯವಾಗಿವೆ ಎಂದು ಅಖಿಲ ಭಾರತ ಶರಣು ಸಾಹಿತ್ಯ ಪರಿಷತ್​ ಗೌರವ ಸಲಹೆಗಾರ ನಾಡೋಜ ಗೋ.ರು. ಚನ್ನಬಸಪ್ಪ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಶ್ರೀ ಬಸವೇಶ್ವರ ಪೀಠವು ಬಸವೇಶ್ವರ ಜಯಂತಿ ನಿಮಿತ್ತ ಕವಿವಿ ಸುವರ್ಣ ಮಹೋತ್ಸವ ಭವನದಲ್ಲಿ ಸಾಂಸತಿಕ ನಾಯಕ ವಿಷಯ ಕುರಿತು ಆಯೋಜಿಸಿದ 2 ದಿನಗಳ ಅಂತರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಬಸವವೇಶ್ವರ ಪೀಠದ ಸುವರ್ಣ ಮಹೋತ್ಸವ ಸಮಾರಂಭಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಬಸವಣ್ಣ ಭೌತಿಕವಾಗಿ ಇಲ್ಲ. ಆದರೆ ಅವರ ತತ್ವಗಳು ನಮ್ಮ ಮುಂದಿವೆ. ಬಡತನ, ಶೋಷಣೆ, ಕಂದಾಚಾರಗಳು ಬೇರೆ ಬೇರೆ ರೂಪದಲ್ಲಿವೆ. ಸನಾತನ ಧರ್ಮ ವ್ಯವಸ್ಥೆಯನ್ನು ಧಿಕ್ಕರಿಸಿ ಬಸವಣ್ಣನವರು ಸಮಾನತೆಯ ಕ್ರಾಂತಿ ಮಾಡಿದರು. ಬಸವಣ್ಣವರ ಸಮಗ್ರ ವ್ಯಕ್ತಿತ್ವವನ್ನು ಎಲ್ಲರೂ ತಿಳಿಯಬೇಕಿದೆ. ಇಂದಿನ ವಿಚಾರ ಸಂಕಿರಣದಲ್ಲಿ ಚರ್ಚೆಗಳು ವಚನಗಳನ್ನು ಆಧರಿಸಿ ನಡೆಯುವುದು ಮುಖ್ಯ ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ವಿಚಾರಗಳನ್ನು ಶಬ್ದಕ್ಕೆ ಸೀಮಿತಗೊಳಿಸದೆ, ಅವರ ಚಿಂತನೆಯ ಪ್ರಾಮುಖ್ಯತೆ ಅರಿಯಬೇಕು. ಮೇಲು ಕೀಳು ಎಂಬ ಸಂಘರ್ಷಕ್ಕೆ ಬಸವೇಶ್ವರರ ಚಿಂತನೆಗಳು ಸಲಹೆಗಳಾಗಿವೆ. ಬಸವೇಶ್ವರ ಮತ್ತು ಅಂಬೇಡ್ಕರ್​ ಆಶಯಗಳನ್ನು ಮನಃ ಪೂರ್ವಕವಾಗಿ ನಾವೆಲ್ಲರೂ ಒಪ್ಪಬೇಕಿದೆ ಎಂದರು.
ಅಮೆರಿಕಾರದ ರವಿಶಂಕರ ಬೋಪಲಾಪುರ, ಉತ್ತರ ಅಮೇರಿಕಾ ಬಸವ ಕೇಂದ್ರದ ಮುಖ್ಯಸ್ಥ ಡಾ. ಸ್ಟೀವ್​ ರೋಚ್​ ಮಾತನಾಡಿದರು. ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಅಧ್ಯಕ್ಷತೆ ವಹಿಸಿದ್ದರು.
ಕುಲಸಚಿವರಾದ ಡಾ. ಎ.ಚೆನ್ನಪ್ಪ, ಡಾ. ನಿಜಲಿಂಗಪ್ಪ ಮಟ್ಟಿಹಾಳ, ಹಣಕಾಸು ಅಧಿಕಾರಿ ಪ್ರೊ. ಸಿ. ಕೃಷ್ಣಮೂತಿರ್, ಕವಿವಿ ಬಸವೇಶ್ವರ ಪೀಠದ ಸಂಯೋಜಕ ಡಾ.ಸಿ.ಎಂ.ಕುಂದಗೋಳ, ಹಂಪಿ ವಿವಿಯ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ, ಡಾ. ವೀರಣ್ಣ ರಾಜೂರ, ಶೈಲಜಾ ರಾಜಕುಮಾರ, ಡಾ.ಸುಪ್ರಿಯಾ ಮಲಶೆಟ್ಟಿ , ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net