

ಮೈಸೂರು: ಮನಸ್ಸು ಸ್ವಸ್ಥವಾಗಿಡಲು ಶರಣರ ಚಿಂತನೆಗಳು ಅವಶ್ಯಕವಾಗಿವೆ ಎಂದು ಹುಣಸೂರಿನ ಡಿ. ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಬಿ.ವಿ.ವಸಂತ ಕುಮಾರ್ ತಿಳಿಸಿದರು.
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಕನ್ನಡ ವಿಭಾಗದಿಂದ ಮಂಗಳವಾರ ಆಯೋಜಿಸಿದ್ದ ಶ್ರೀ ಶಿವ ಸ್ಮರಣಾರ್ಥ ದತ್ತಿ ಉಪನ್ಯಾಸ: ಬಸವ ಚಿಂತನೆ ಕಾರ್ಯಕ್ರಮದಲ್ಲಿ ಬಸವಣ್ಣನವರ ದೈವಪರ ಚಿಂತನೆ ವಿಷಯ ಕುರಿತು ಅವರು ಮಾತನಾಡಿದರು.
ಬಸವಣ್ಣನವರ ಚಿಂತನೆಗಳು ಸಮಷ್ಟಿ ಸ್ವರೂಪ ಹೊಂದಿದ್ದು, ಆತ್ಮವಿಕಾಸ ಮಾರ್ಗವಾಗಿವೆ. ಜೀವ ಮತ್ತು ದೈವ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮನಸ್ಸು ಸ್ವಸ್ಥವಾಗಿಡಲು ಶರಣರ ಚಿಂತನೆಗಳು ಅವಶ್ಯಕವಾಗಿವೆ. ದೇಹ, ಜೀವ, ಆತ್ಮ ಪರಮಾತ್ಮಗಳ ಸಮಾಗಮವನ್ನು ಬಸವಣ್ಣನವರು ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ ಎಂದರು.
ಬಸವಣ್ಣನವರ ಜೀವಪರ ಚಿಂತನೆ ವಿಷಯ ಕುರಿತು ನಿವೃತ್ತ ಪ್ರಾಧ್ಯಾಪಕಿ ಡಾ.ಎಚ್.ಎಂ.ಕಲಾಶ್ರೀ ಮಾತನಾಡಿ, ಹನ್ನೆರಡನೇ ಶತಮಾನದ ಶರಣ ಸಾಹಿತ್ಯ ಕ್ರಾಂತಿಯಾಗಿರದೆ, ಅದು ತಾಯ್ತನದ ಜೀವಪರವಾದ ಚಳವಳಿಯಾಗಿದೆ ಎಂದು ಬಣ್ಣಿಸಿದರು.
ಶರಣರು ದುಡಿಮೆಯಲ್ಲಿ ದೇವರಿದ್ದಾನೆ ಎಂಬುದನ್ನು ಬಲವಾಗಿ ನಂಬುವುದರ ಜತೆಗೆ ಆಚರಣೆಗೂ ತಂದರು. ಬಸವಣ್ಣನವರು ಮಾತೃ ಹೃದಯ ಹೊಂದಿದ್ದರು. ಮಾನವೀಯ ಮೌಲ್ಯಗಳ ಮೂರ್ತಿಯಾಗಿದ್ದರು ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಪ್ರಸ್ತುತ ವರ್ತಮಾನಕ್ಕೆ ಬಸವಣ್ಣನವರು ವಿವೇಕದ ಪ್ರತಿನಿಧಿಯಾಗಿದ್ದಾರೆ. ದೇವಾಲಯದ ಸ್ವರೂಪ ಕುರಿತು ಬಸವಣ್ಣನವರ ಚಿಂತನೆ ಶ್ರೇಷ್ಟಮಟ್ಟದ್ದಾಗಿದೆ. ನಿರಾಕಾರ ಸ್ವರೂಪಿಯನ್ನು ಆಕಾರ ಮೂರ್ತಿಯನ್ನಾಗಿ ಪರಿಭಾವಿಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲ ಡಾ.ರೇಚಣ್ಣ, ದತ್ತಿದಾನಿಗಳಾದ ಡಾ.ಕೆ.ಎಸ್.ರಾಜಶೇಖರ, ಕನ್ನಡ ವಿಭಾಗದ ಮುಖ್ಯಸ್ಥ ಆರ್.ಎಸ್.ಕುಮಾರ್ ಇತರರು ಇದ್ದರು.