

ಮೈಸೂರು: ಶರಣರ ಬದುಕು ಸರ್ವಕಾಲಕ್ಕೂ ಆದರ್ಶವಾದದ್ದು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಹೇಳಿದರು.
ಊಟಿಯ ತೀಟಕಲ್‌ನ ಜೆಎಸ್‌ಎಸ್ ಪಬ್ಲಿಕ್ ಶಾಲಾ ಆವರಣದಲ್ಲಿ ಸುತ್ತೂರಿನ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಜೆಎಸ್‌ಎಸ್ ಮಹಾವಿದ್ಯಾಪೀಠ ಹಾಗೂ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಗಳ ಸಂಯುಕ್ತಾಶ್ರಯದಲ್ಲಿ ಸಾರ್ವಜನಿಕರಿಗೆ ಹಮ್ಮಿಕೊಂಡಿದ್ದ ಜೀವನೋತ್ಸಾಹ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಶರಣ ಸಂಸ್ಕೃತಿ ಕುರಿತು ಮಾತನಾಡಿದರು.
ನಡೆ-ನುಡಿಗಳಲ್ಲಿ ಅಂತರವಿರದ ಜೀವನ ಶರಣರದಾಗಿತ್ತು. ಶರಣರು ಕರ್ಮ ಸಿದ್ದಾಂತವನ್ನು ಕಾಯಕ ಸಿದ್ಧಾಂತವಾಗಿಸಿದವರು. ಅವರ ನಡೆನುಡಿಗಳಲ್ಲಿ ಸಮನ್ವಯವಿತ್ತು. ಅವರ ವಚನಗಳು ಅಂತರಂಗದ ಅನುಭಾವದ ನುಡಿಗಳಾಗಿವೆ. ಜನವಾಣಿಯನ್ನು ದೇವವಾಣಿಯನ್ನಾಗಿಸಿದ್ದು ಶರಣ ಸಂಸ್ಕೃತಿ ಎಂದರು.
ಪತ್ರಕರ್ತ ರವೀಂದ್ರ ಭಟ್ಟ ಮಾತನಾಡಿ, ಸಾಮಾಜಿಕ ಜಾಲತಾಣಗಳು ಬಂದ ನಂತರ ಜನರ ಮನೋಭಾವ ಮತ್ತು ಜೀವನ ಪದ್ಧತಿ ಬದಲಾಗಿದೆ. ಮುದ್ರಣ ಮಾಧ್ಯಮಕ್ಕಿಂತ ದೃಶ್ಯ ಮಾಧ್ಯಮ ಬಹಳ ಪರಿಣಾಮಕಾರಿಯಾಗಿ ಬೆಳೆದಿದೆ. ಪತ್ರಕರ್ತರಾದವರು ಸಕಾರಾತ್ಮಕ ಲೇಖನಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ಗ್ರಂಥಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬೆಳಗಾವಿ ಜಿಲ್ಲೆಯ ಶೇಗುಣಸಿಯ ಶ್ರೀ ವಿರಕ್ತಮಠದ ಡಾ.ಶ್ರೀ ಮಹಾಂತ ಪ್ರಭುಸ್ವಾಮೀಜಿ ಮಾತನಾಡಿ, ಮನಸ್ಸನ್ನು ಪರಿಶುದ್ದಗೊಳಿಸಿ ಕೊಂಡಲ್ಲಿ ನಿಶ್ಚಿಂತ ಬದುಕು ಸಾಧ್ಯ. ಜನರು ನೆಮ್ಮದಿಯ ಜೀವನವನ್ನು ನಡೆಸಲು ಚಿಂತೆಯಿಂದ ವಿಮುಕ್ತರಾಗಬೇಕು. ಸದಾ ಪರಮಾತ್ಮನ ಕುರಿತು ಆಲೋಚನೆ ಮಾಡುತ್ತಿದ್ದಲ್ಲಿ ಸಂತೋಷ ಕಾಣಲು ಸಾಧ್ಯವಾಗುತ್ತದೆ ಎಂದರು.
ಶಿಬಿರದಲ್ಲಿ ಸಾಂಗ್ಲಿ ಜಿಲ್ಲೆ, (ಮಹಾರಾಷ್ಟ್ರ) ಕಲಬುರಗಿ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಧಾರಾವಾಡ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು, ಹಾಸನ ಹಾಗೂ ಮೈಸೂರು ಜಿಲ್ಲೆಗಳಿಂದ 230ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.