

ಯಗಟಿಪುರ : 12ನೇ ಶತಮಾನದ ಶರಣರ ದೃಷ್ಟಿಕೋನ ಅರ್ಥೈಸಿಕೊಂಡರೆ ಜೀವನ ಸರಳತೆಯೊಂದಿಗೆ ಸಾರ್ಥಕತೆ ದಾರಿಯಲ್ಲಿ ಸಾಗುತ್ತದೆ ಎಂದು ಯಳನಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮದೇಶಿ ಕೇಂದ್ರ ಸ್ವಾಮೀಜಿ ಹೇಳಿದರು.
ಕೆ.ಹೊಸಳ್ಳಿಯ ಗಂಗಾಂಭಿಕ ಕಲ್ಯಾಣ ಮಂಟಪದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ಯಳನಡು ಮಹಾಸಂಸ್ಥಾನ ಮಠದ ಸಹಯೋಗದಲ್ಲಿ ಆಯೋಜಿಸಿದ್ದ ಬಸವ ಜಯಂತಿ, ತಾಲೂಕು ಕದಳಿ ಮಹಿಳಾ ವೇದಿಕೆ ಸೇವಾದೀಕ್ಷೆ ಕಾರ್ಯಕ್ರಮದ ಶರಣರ ಬೆಳದಿಂಗಳು ಉಪನ್ಯಾಸ ಮಾಲಿಕೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶರಣರ ಬದುಕು ಸರ್ವಕಾಲಕ್ಕೂ ಆದರ್ಶವಾಗಿದೆ. ನಡೆ-ನುಡಿಗಳಲ್ಲಿ ಅಂತರವಿರದ ಜೀವನ ಶರಣರದಾಗಿತ್ತು. ಕರ್ಮ ಸಿದ್ದಾಂತವನ್ನು ಕಾಯಕ ಸಿದ್ದಾಂತವಾಗಿಸಿದರು. ವಚನಗಳು ಅಂತರಂಗದ ಅನುಭಾವದ ನುಡಿಗಳಾಗಿದ್ದವು. ಈ ನಿಟ್ಟಿನಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಘಟಕ ಶರಣದ ಬದುಕಿನ ಪ್ರಕಾರಗಳ ಬಗ್ಗೆ ಮಾಸಿಕ ಬೆಳದಿಂಗಳ ಕಾರ್ಯಕ್ರಮದಡಿ ಕ್ರೀಯಾತ್ಮಕವಾಗಿ ಪ್ರಚಾರ ಪಡಿಸುತ್ತಿರುವುದು ಶ್ಲಾಘನೀಯ ಎಂದರು.
ನಿವೃತ್ತ ಎಸಿಎ್ ಕೆ.ಬಿ.ಬಸವರಾಜಪ್ಪ ಮಾತನಾಡಿ, ಬಸವಾದಿ ಶರಣರು ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಮೂಲಕ ಸಮಾಜದಲ್ಲಿದ್ದ ಮೂಢನಂಬಿಕೆಗಳ ವಿರುದ್ದ ಕ್ರಾಂತಿಕಾರಕ ಹೆಜ್ಜೆಯೊಂದಿಗೆ ಬದುಕಿಗೆ ದಾರಿ ದೀಪವಾಗಿದ್ದರು. ಇಂದಿನ ಯುವ ಜನತೆ ವಚನ ಸಾಹಿತ್ಯದ ಕಡೆ ಹೆಚ್ಚು ಒತ್ತು ನೀಡಿ ಸಾಹಿತ್ಯದ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಸ್.ಓಂಕಾರಪ್ಪ, ಐಎ್ಎಸ್‌ನಲ್ಲಿ 7ನೇ ರ‌್ಯಾಂಕ್ ಪಡೆದ ವಿ.ಯರದಕೆರೆ ಗ್ರಾಮದ ವಿದ್ಯಾರ್ಥಿನಿ ವೈ.ಎಸ್.ಕಾವ್ಯ, ಯಮುನಾ ಮೋಹನ್ ಅವರನ್ನು ಸನ್ಮಾನಿಸಲಾಯಿತು.
ನಿಕಟಪೂರ್ವ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ವಿ.ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಅಧ್ಯಕ್ಷ ಕೆ. ವಿರೂಪಾಕಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಯಗಟಿಪುರ ಪ್ರಸನ್ನ ಪ್ರತಿಜ್ಞಾವಿಧಿ ಭೋಸಿದರು. ತಾಲೂಕು ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಜಾತ ಜಡೆಮಲ್ಲಪ್ಪ ಸೇವಾದೀಕ್ಷೆ ಪಡೆದರು. ನಿಕಟಪೂರ್ವ ಅಧ್ಯಕ್ಷೆ ಪುಷ್ಪಾ ಸುಬ್ರಹ್ಮಣ್ಯ, ಕೆ.ಜಿ.ಶ್ರೀ ನಿವಾಸ್‌ಮೂರ್ತಿ, ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ವಿದ್ಯಾದರೆ, ಕೆ.ಜೆ.ಚಂದ್ರಪ್ಪ, ಎಂ.ಟಿ. ಜಯಕುಮಾರ್, ಬಿ.ಬಿ.ಆನಂದಮೂರ್ತಿ, ರಂಗಪ್ಪ, ಕೆ.ಎಸ್.ನಾಗರಾಜ್, ಶಾರದ ಸುರೇಂದ್ರಬಾಬು, ರಾಜಣ್ಣ, ಗಂಗಾಧರ್ ಶಿವಪುರ ಇದ್ದರು.