

ಕಡೂರು: 12ನೇ ಶತಮಾನದ ಬಸವಾದಿ ಶರಣರ ವಿಚಾರಧಾರೆಗಳನ್ನು ಜನಮಾನಸಕ್ಕೆ ತಲುಪಿಸುವ ವಿಶೇಷ ಅಭಿಯಾನದ ಕಾರ್ಯಕ್ರಮವೇ ಶ್ರಾವಣ ಸಂಜೆ ಶರಣರ ಸಂದೇಶ ಕಾರ್ಯಕ್ರಮ ಎಂದು ಕಡೂರು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ತಿಳಿಸಿದರು.
ಯಳನಾಡು ಮಠದ ಆವರಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ತಾಲೂಕು ಕದಳಿ ಮಹಿಳಾ ವೇದಿಕೆ ಮತ್ತು ಹೋಬಳಿ ಘಟಕ ಹಾಗೂ ಯಳನಡು ಮಠದ ಆಶ್ರಯದಲ್ಲಿ ಶ್ರಾವಣ ಮಾಸದಲ್ಲಿ ನಡೆಯುವ ಶ್ರಾವಣ ಸಂಜೆ ಶರಣರ ಸಂದೇಶ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ವರ್ಷ ಜು.25 ರಿಂದ ಆ.22 ರವರೆಗೆ ತಾಲೂಕಿನ ಆಯ್ದ 29 ಸ್ಥಳಗಳಲ್ಲಿ ಪ್ರತಿ ದಿನ ಸಂಜೆ 12ನೇ ಶತಮಾನದ ಬಸವಾದಿ ಶರಣರ ವಿಚಾರಧಾರೆಗಳನ್ನು ಉಪನ್ಯಾಸ ಮಾಲಿಕೆ ಮೂಲಕ ಜನಮಾನಸಕ್ಕೆ ಮುಟ್ಟಿಸುವ ಕೆಲಸ ಮಾಡಲಾಗುತ್ತದೆ. ಬಡವ-ಬಲ್ಲಿದ ಎಂಬ ವರ್ಗಭೇದ ಗಂಡು- ಹೆಣ್ಣು ಎಂಬ ಲಿಂಗಭೇದ ಮೇಲು-ಕೀಳು ಎಂಬ ಜಾತಿಭೇದ ಆಳು -ಅರಸ ಎಂಬ ಸ್ಥಾನ ಭೇದ ಹೋಗಲಾಡಿಸುವ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಕಂಕಣ ಬದ್ಧರಾಗಿ ನಿಂತವರು 12ನೇ ಶತಮಾನದ ಬಸವಾದಿ ಶರಣರು, ಅಜ್ಞಾನ, ಮಾಢನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸಿ ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿದ ಎಲ್ಲ ಶರಣರ ವಿಚಾರಗಳನ್ನು ತಿಳಿಸಲಾಗುತ್ತದೆ ಎಂದರು.
ಕೋಶಾಧ್ಯಕ್ಷ ಹೊಸೂರು ಪುಟ್ಟರಾಜು, ಗೌರವಾಧ್ಯಕ್ಷ ಕೆ.ಬಿ.ಬಸವರಾಜಪ್ಪ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಜಾತ ಜಡೆಮಲ್ಲಪ್ಪ ಕಾರ್ಯದರ್ಶಿ ಉಮಾ ಬಸವರಾಜ್, ಮೋಹನ್ ಕುಮಾರ್ ಹೋಬಳಿ ಅಧ್ಯಕ್ಷರಾದ ಶಿವಲಿಂಗಪ್ಪ, ಜಿ.ಟಿ. ರಾಜಶೇಖರ್, ಅನಿಲ್ ಕುಮಾರ್, ರುದ್ರಪ್ಪ, ಗಂಗಾಧರ ಶಿವಪುರ, ಹೊಗರೆಹಳ್ಳಿ ಗಣೇಶಣ್ಣ, ಪ್ರಕಾಶ್, ಜಿ.ಬಿ.ಆನಂದ ಮೂರ್ತಿ, ಹಿರೇನಲ್ಲೂರು ಶಾಂತಕುಮಾರ್, ಅನಿತಾ, ಮಮತಾ ಇತರರಿದ್ದರು.