

ವಿಜಯಪುರ: ಬಸವಾದಿ ಶರಣರು ಸಮತಾವಾದದ ಮೇಲೆ ಸಮಾಜವನ್ನು ಕಟ್ಟಿದ್ದರು. ಆ ಪರಿಕಲ್ಪನೆ ಇಂದು ಹೆಚ್ಚು ಪ್ರಸ್ತುತವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಶಿವಯೋಗಿ ಸಿದ್ಧರಾಮ ಜಯಂತಿಯ ಉದ್ಘಾಟನೆ ನೇರವೇರಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಿ ಅಲ್ಲಿ ಎಲ್ಲರಿಗೂ ಅವಕಾಶ ಕಲ್ಪಿಸುವ ಮೂಲಕ ಸಮಾನತೆಯ ಸಂದೇಶ ಸಾರಿದ್ದರು. ಶಿವ ಶರಣ ಬಸವಣ್ಣನವರು, ಸಿದ್ದರಾಮರು ಸಮಾತಾವಾದದ ಮೇಲೆ ಸಮಾಜ ಕಟ್ಟಿದವರಾಗಿದ್ದಾರೆ ಎಂದರು.
ಮೂಢ ನಂಬಿಕೆಗಳನ್ನು ಕಿತ್ತೊಗೆದು ನಮಗೆಲ್ಲ ದಾರಿದೀಪವಾಗಿದ್ದಾರೆ. ಏಕದೇವೋಸನೆ ಪ್ರತಿಪಾದಿಸಿದ ಅವರು ಶರಣರ ಜೀವನ ಹಾಗೂ ವಚನಗಳು ನಮಗೆ ಸಮಾತಾ ಸಮಾಜವಾದವನ್ನು ಕಟ್ಟಿಕೊಟ್ಟಿವೆ. ಸಮಾನತೆ ಸಮಾಜವನ್ನು ನಿರ್ಮಾಣ ಮಾಡಲಿಕ್ಕೆ 12ನೇ ಶತಮಾನ ಭದ್ರ ಬುನಾದಿ ಹಾಕಿಕೊಟ್ಟಿದೆ. ಬುದ್ಧ, ಅಂಬೇಡ್ಕರ್, ಪೆರಿಯಾರ್ ಹಾಗೂ ಜ್ಯೋತಿಬಾ ಫುಲೆ ಅವರು ಸಮಾನತೆಯ ಸಮಾಜವನ್ನು ಕಟ್ಟಿದ್ದಾರೆ.
ತೃತ್ವ, ಸಹೋದರತ್ವದ ಭಾವನೆ ಬೆಳೆಸಿದ್ದಾರೆ. ಇದೇ ಭಾವನೆಯ ಮೇಲೆ ಭಾರತೀಯ ಸಂವಿಧಾನ ನಿಂತಿದೆ ಎಂದರು.
ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಬಸವಾದಿ ಶರಣರ ಆಶಯಗಳೇ ಸ್ಪೂರ್ತಿ. ಅಂತೆಯೇ ಸಮಾನತೆಯನ್ನು ತರುವಲ್ಲಿ ಅಂಬೇಡ್ಕರ್ ಶ್ರಮಿಸಿದರು.
ಇಂದಿನ ಭಾರತ ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್ ಮುಂತಾದ ಮಹನೀಯರ ವೈಚಾರಿಕ ತಳಹದಿಯ ಮೇಲೆ ನಿಂತಿದೆ. ಶಿವ ಶರಣರು ಅನ್ನ ದಾಸೋಹಿಗಳಾಗಿದ್ದರು.
ಅಂಥ ಮಹಾನ್ ಚೇತನರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕೆಂದರು.
ಸಿಕ್ಯಾಬ್ ಕಾಲೇಜಿನ ಪ್ರಾಧ್ಯಾಪಕ ವಿವೇಕ ಕುಂಟೋಜಿ ಉಪನ್ಯಾಸ ನೀಡುತ್ತಾ, ಶಿವಯೋಗಿ ಸಿದ್ಧರಾಮರು ಕೃಷಿಕ, ವಿಾನಿ ಅಷ್ಟೇ ಅಲ್ಲದೆ ಇಂಜಿನೀಯರ್ ಆಗಿ ಜನಮನ ಗಳಿಸಿದ್ದವರಾಗಿದ್ದರು. ಅಂದಿನ ಕಾಲಗಳಲ್ಲಿ ವಿಜಯಪುರ ಹಾಗೂ ಸೋಲಾಪುರ ಭಾಗಗಳಲ್ಲಿ ಹೆಚ್ಚಾಗಿ ಬರದಿಂದ ಕೂಡಿದ್ದನ್ನು ಮನಗಂಡು ಇಂದಿನ ಕೆರೆಗಳನ್ನು ಕಟ್ಟಿಸಿದರು. ಮೂಢ ನಂಬಿಕೆ, ಕಂದಾಚಾರ, ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದ ಮಹಾನ್ ಶರಣ ಶಿವಯೋಗಿ ಸಿದ್ಧರಾಮ ಎಂದರು.
ಮುಖಂಡ ನಾಗಪ್ಪ ಗುಜರಕರ ಮಾತನಾಡಿದರು. ಪಾಲಿಕೆ ಸದಸ್ಯ ವಿಠಲ ಹೊಸಪೇಟೆ, ರಾಹುಲ ಜಾಧವ, ಮುಖಂಡರಾದ ವಿ.ಸಿ ನಾಗಠಾಣ, ಮ.ಗು. ಯಾದವಾಡ, ರಾಮು ಹೊಸಪೇಟೆ, ಭೀಮರಾಯ ಜಿಗಜಿಣಗಿ, ದೇವೇಂದ್ರ ಮೀರೆಕರ, ಸೋಮನಗೌಡ ಕಲ್ಲೂರ, ಕೆ.ವೈ. ಆಲಕುಂಟೆ ಮತ್ತಿತರರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ಸಿದ್ಧರಾಮೇಶ್ವರರ ಭಾವಚಿತ್ರ ಮೆರವಣಿಗೆಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಚಾಲನೆ ನೀಡಿದರು.