

ಮಡಿಕೇರಿ: ದೇವಭಾಷೆಗೆ ಸರಿಸಮವಾಗಿ ಕನ್ನಡ ಭಾಷೆಯನ್ನು ನಾಡು ಭಾಷೆಯಾಗಿ ಬೆಳೆಸುವಲ್ಲಿ ಮತ್ತು ವಚನಗಳ ಮೂಲಕವೇ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಶರಣರು ನೀಡಿದ ಕೊಡುಗೆಗಳು ಸಾಮಾನ್ಯವಾದುದ್ದಲ್ಲವೆಂದು ಅರಮೇರಿ ಕಳಂಚೇರಿ ಮಠದ ಪೀಠಾಧ್ಯಕ್ಷ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅರಮೇರಿ ಕಳಂಚೇರಿ ಮಠ ಮತ್ತು ಎಸ್‌ಎಂಎಸ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಅರಮೇರಿ ಮಠದಲ್ಲಿ ನಡೆದ ಧರ್ಮಚಿಂತಾಮಣಿ ಮಹಾಶರಣ ಲಿಂಗೈಕ ಮಾಗನೂರು ಬಸಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಇಂದಿನ ಪೀಳಿಗೆಯ ವಿದ್ಯಾರ್ಥಿಗಳು ಶರಣರು ನೀಡಿ ಹೋದ ವಚನಗಳನ್ನು ಪಠಣ ಮಾಡುವ ಮೂಲಕ ಜ್ಞಾನಾರ್ಜನೆಯನ್ನು ಸಂಪಾದಿಸಿಕೊಳ್ಳಬೇಕು. ಸಮಾಜ ಸುಧಾರಣೆಯ ಅಪೂರ್ವ ವಚನಗಳನ್ನು ಅರ್ಥೈಸಿಕೊಳ್ಳುವುದರ ಮೂಲಕ ತಮ್ಮ ನಡೆನುಡಿಗಳಲ್ಲಿ ಉತ್ತಮ ವ್ಯಕ್ತಿತ್ವವವನ್ನು ಬೆಳೆಸಿಕೊಳ್ಳಲು ಮುಂದಾಗಬೇಕೆಂದು ಶ್ರೀಶಾಂತಮಲ್ಲಿಕಾರ್ಜುನ ಸ್ವಾಮಿಗಳು ಕರೆ ನೀಡಿದರು.
ಕನ್ನಡ ಭಾಷೆಯ ಬೆಳವಣಿಗೆಗೆ ಶರಣರ ಕೊಡುಗೆ ಎಂಬ ವಿಷಯದ ಕುರಿತು ಸಂತ ಅನ್ನಮ್ಮ ಪದವಿ ಕಾಲೇಜಿನ ಉಪನ್ಯಾಸಕಿ ಪ್ರತಿಮಾ ರೈ ಮಾತನಾಡಿ, ಸಾಹಿತ್ಯಕ್ಕೆ ಶರಣ ಸಾಹಿತ್ಯದ ಕೊಡುಗೆ ವಿಶ್ವವ್ಯಾಪ್ತಿಯಾಗಿದ್ದು, ಜನಸಾಮಾನ್ಯರಿಗೆ ಅರ್ಥವಾಗುವ ಹಾಗೆ ಶರಣರು ವಚನಗಳನ್ನು ರೂಪಿಸಿದ್ದಾರೆ. ಅದನ್ನು ಸಮಾಜದ ಮುಂದೆ ಹೇಳುವ ಮೂಲಕ ಮಾನವ ಸಮಾಜ ಬದುಕನ್ನು ಅರ್ಥೈಸಿಕೊಳ್ಳುವಂತೆ ಮಾಡಲಾಯಿತು. ಸಮಾಜದ ಕೆಳಸ್ಥರದ ಜನರು ಕನ್ನಡ ಭಾಷೆಯ ಮೂಲಕ ವಚನಗಳನ್ನು ಸರಳವಾಗಿ ಅರ್ಥೈಸಿಕೊಂಡು ಸುಂದರ ಬದುಕನ್ನು ಕಂಡುಕೊಳ್ಳಲು ಸಾಧ್ಯವಾಯಿತು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜೇಶ್ ಪದ್ಮನಾಭ ಉದ್ಘಾಟಿಸಿ ಮಾತನಾಡಿದರು.
ಶ್ರೀಶಾಂತಮಲ್ಲಿಕಾರ್ಜುನ ಸ್ವಾಮಿಜಿ ಹಾಗೂ ಉಪನ್ಯಾಸಕಿ ಪ್ರತಿಮಾ ರೈ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹ್ಮದ್ ಪ್ರಾಸ್ತಾವಿಕ ನುಡಿಗಳಾಡಿದರು. ಕಸಾಪ ಗೌರವ ಕೋಶಾಧಿಕಾರಿ ಎಸ್.ಎಸ್.ಸಂಪತ್‌ಕುಮಾರ್, ಮಡಿಕೇರಿ ತಾಲೂಕು ಗೌರವ ಕಾರ್ಯದರ್ಶಿ ಕೆ.ಟಿ.ಬೇಬಿಮ್ಯಾಥ್ಯು, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸ್ವಪ್ನ ಸುಬ್ಬಯ್ಯ ಉಪಸ್ಥಿತರಿದ್ದರು.