ಶಿರಸಿ ಮಾರಿಕಾಂಬೆ ದೇಗುಲದಲ್ಲಿ ಶರನ್ನವರಾತ್ರಿ ಸಂಭ್ರಮ

NAVARATRI MARIKAMBE DEVI
Published on

ಶಿರಸಿ: ರಾಜ್ಯದ ಶಕ್ತಿ ಪೀಠಗಳಲ್ಲಿ ಒಂದಾದ ನಗರದ ಮಾರಿಕಾಂಬಾ ದೇವಾಲಯದಲ್ಲಿ ಶರನ್ನವರಾತ್ರಿಯ ಸಂಭ್ರಮ ಕಳೆಗಟ್ಟಿದೆ. ರಾಜ್ಯದ ವಿವಿಧ ಭಾಗಗಳಿಂದಲೂ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದುಕೊಳ್ಳುತ್ತಿದ್ದಾರೆ.

ಮಾರಿಕಾಂಬಾ ದೇವಾಲಯದ ಆವರಣವನ್ನು ಹೂವುಗಳಿಂದ ಸಿಂಗರಿಸಲಾಗಿದೆ. ದೇವಾಲಯದ ಮಹಾದ್ವಾರ, ಗರ್ಭಗುಡಿಯನ್ನು ಅಲಂಕರಿಸಲಾಗಿದ್ದು, ಸರ್ವಾಭರಣ ಭೂಷಿತ ಮಾರಿಕಾಂಬೆ ಭಕ್ತರನ್ನು ಹರಸುತ್ತಿದ್ದಾಳೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸೇರಿ ವಿವಿಧ ಗಣ್ಯರು ಗುರುವಾರ ದೇವಿಯ ದರ್ಶನ ಪಡೆದುಕೊಂಡರು.

ದೇವಾಲಯದಲ್ಲಿ ಗುರುವಾರ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ 8 ಗಂಟೆಯಿಂದ ಸಪ್ತಶತಿ ಪಾರಾಯಣ ಹಾಗೂ ಪಲ್ಲವ ಪಾರಾಯಣ ಕಾರ್ಯಕ್ರಮಗಳು ನಡೆದವು. ಸಂಜೆ ಕೀರ್ತನಾಚತುರ ಎಂದು ಖ್ಯಾತಿ ಪಡೆದಿರುವ ಮಂಡ್ಯದ ಮಧುಸೂಧನ ದಾಸರಿಂದ ಕೀರ್ತನೆ ನಡೆಯಿತು. ಶರನ್ನವರಾತ್ರಿ ಉತ್ಸವದ ಅಂಗವಾಗಿ ಮಾರಿಕಾಂಬಾ ದೇವಾಲಯದ ಆವರಣದಲ್ಲಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆಯುತ್ತವೆ. ಸ್ಥಳೀಯ ಪ್ರತಿಭೆಗಳು, ಮಕ್ಕಳಿಗೆ ತಮ್ಮ ಕೌಶಲ ಪ್ರದರ್ಶಿಸಲು ದೇವಾಲಯದ ಆವರಣ ವೇದಿಕೆಯಾಗಿ ಪರಿಣಮಿಸುತ್ತದೆ. ಗುರುವಾರ 5ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಎರಡು ವಿಭಾಗದಲ್ಲಿ ಚುಕ್ಕಿ ರಂಗವಲ್ಲಿ ಸ್ಪರ್ಧೆ ನಡೆದರೆ, ದೇವಸ್ಥಾನದ ಆವರಣದಲ್ಲಿರುವ ಸಭಾ ಮಂಟಪದಲ್ಲಿ ಶಾಲಾ ಮಕ್ಕಳಿಗಾಗಿ ಎರಡು ವಿಭಾಗದಲ್ಲಿ ಭಕ್ತಿಗೀತೆ ಸ್ಪರ್ಧೆ ನಡೆಯಿತು.

ದೇವಾಲಯದ ಅಧ್ಯಕ್ಷ ರವೀಂದ್ರ ನಾಯ್ಕ, ಉಪಾಧ್ಯಕ್ಷ ಸುದೇಶ ಜೋಗಳೇಕರ್, ಧರ್ಮದರ್ಶಿಗಳಾದ ಸುಧೀರ ಹಂದ್ರಾಳ, ಶಿವಾನಂದ ಶಿವನಂಚಿ, ವತ್ಸಲಾ ಹೆಗಡೆ, ಬಾಬುದಾರ ಮುಖ್ಯಸ್ಥ ಜಗದೀಶ ಗೌಡ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net