

ಬೇಲೂರು : ಪಟ್ಟಣದ ಶಂಕರಮಠದಲ್ಲಿ ಶರನ್ನವರಾತ್ರಿ ಅಂಗವಾಗಿ ಭಾನುವಾರ ರಾತ್ರಿ ಶಾರದಾಪರಮೇಶ್ವರಿ ಅಮ್ಮನವರ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು.
ಶಂಕರಮಠದಲ್ಲಿ ಶಾರದಪರಮೇಶ್ವರಿ ಅಮ್ಮನವರ ಮೂರ್ತಿಗೆ ಅನ್ನಪೂರ್ಣ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿ, ರಾತ್ರಿ ಸುರಿಯುತ್ತಿದ್ದ ಮಳೆಯ ನಡೆವೆಯೂ ಅಡ್ಡಪಲ್ಲಕ್ಕಿಗೆ ಶಾರದಪರಮೇಶ್ವರಿಯವರ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ, ದೇಗುಲದ ಎಂಟು ಬೀದಿಗಳಲ್ಲಿ ಉತ್ಸವ ಮಾಡಲಾಯಿತು.
ಈ ಸಂದರ್ಭದಲ್ಲಿ ಮಠದ ಕಾರ್ಯದರ್ಶಿ ಆರ್.ಸುಬ್ರಹ್ಮಣ್ಯ ಮಾತನಾಡಿ, ಶರನ್ನವರಾತ್ರಿ ಅಂಗವಾಗಿ, ನಾಡಿನ ಜನರ ಒಳಿತಿಗಾಗಿ ಮಠದಲ್ಲಿ ಶಾರದಪರಮೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ, ಹೋಮ, ಹವನಗಳನ್ನು ಮಾಡಲಾಗಿದೆ. ಶಂಕರಚಾರ್ಯರು ಹಾಗೂ ಚಂದ್ರಮೌಳೇಶ್ವರ ದೇವರಿಗೆ ವಿಶೇಷ ಪೂಜೆ, ಅಭಿಷೇಕ ಮಾಡಲಾಗಿದೆ ಎಂದು ತಿಳಿಸಿದರು.
ಮಠದ ಸಲಹೆಗಾರ ಕೆ.ಆರ್.ಮಂಜುನಾಥ್, ಪ್ರಧಾನ ಅರ್ಚಕ ಸುಮಂತಕುಮಾರ ಶರ್ಮ, ಪದಾಧಿಕಾರಿಗಳಾದ ಎಂ.ಜೆ.ಅನಂತಮೂರ್ತಿ, ಬಿ.ಕೆ.ರವೀಂದ್ರ, ರಮೇಶ್, ವಿ.ಸುರೇಶ್, ತೋ.ಚ. ಅನಂತ ಸುಬ್ಬರಾಯ ಸದಸ್ಯರಾದ ಶ್ರೀವತ್ಸ, ನಾಗೇಶ್, ಹರ್ಷ, ರೋಹಿತ್, ಗಣೇಶ್ ಸೇರಿದಂತೆ ಇತರರು ಇದ್ದರು.