

ಕೊಪ್ಪಳ: ಶರಣರ ನುಡಿಯಂತೆ ಗುರುವಿನ ಗುಲಾಮನಾಗುವತನಕ ದೊರಕದಯ್ಯ ಮುಕುತಿ ಎಂಬ ಅನುಭವಿಕರ ಮಾತು ನಿಜ. ಪ್ರತಿಯೊಬ್ಬರಿಗೂ ಗುರುವಿನ ಮಾರ್ಗದರ್ಶನ ಅವಶ್ಯ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಎಸ್.ಗೋನಾಳ ಅಭಿಪ್ರಾಯಪಟ್ಟರು.
ತಾಲೂಕಿನ ಭಾಗ್ಯನಗರದ ಸದಾನಂದ ಜ್ಞಾನ ಯೋಗಾಶ್ರಮದಲ್ಲಿ ಹಮ್ಮಿಕೊಂಡ ದಿ.ವಿಠ್ಠಪ್ಪ ಗೋರಂಟ್ಲಿಯವರ ಮೂರನೇ ವರ್ಷದ ಪುಣ್ಯ ಸ್ಮರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಬ್ಬ ಮನುಷ್ಯನು ಬಾಲ್ಯದಿಂದ ತನ್ನ ಜೀವನದ ಕಟ್ಟಡಕಡೆಯ ಅವಧಿಯವರೆಗೂ ಗುರುವಿನ ಪಾತ್ರ ಮುಖ್ಯ. ವಿದ್ಯಾರ್ಥಿಯ ಬಾಳಿನಲ್ಲಿ ಒಬ್ಬ ಶಿಕ್ಷಕ, ಯೌವ್ವನದಲ್ಲಿ ಕಾಲೇಜಿನ ಪ್ರಾಧ್ಯಾಪಕ ಹೀಗೆ ಹಲವು ಮಜಲುಗುಳಲ್ಲಿ ಒಬ್ಬ ಗುರುವಿನ ಪಾತ್ರ ಇದ್ದೇ ಇರುತ್ತದೆ. ಇದಕ್ಕೆ ನಾನು ಕೂಡಾ ಹೊರತಾಗಿಲ್ಲ. ನಾನು ಪತ್ರಿಕಾ ಹಾಗೂ ಸಾಹಿತ್ಯ ರಂಗದಲ್ಲಿ ಪಾದಾರ್ಪಣೆ ಮಾಡಿದಾಗ, ದಿ.ವಿಠ್ಠಪ್ಪರವರು ನನ್ನ ಬೆನ್ನುತಟ್ಟಿ ಸದಾ ಪ್ರೋತ್ಸಾಹ ನೀಡಿದ ಮಹಾಚೇತನ. ನನ್ನ ಯಶಸ್ಸಿಗೆ ಅವರ ಮಾರ್ಗದರ್ಶನ ಕಾರಣ ಎಂದರು.
ಚಿಂತಕ ವೀರಣ್ಣ ಹುರಕಡ್ಲಿ ಮಾತನಾಡಿದರು. ದದೇಗಲ್ ಸಿದ್ಧಾರೂಡ ಮಠದ ಪೂಜ್ಯಶ್ರೀ ಆತ್ಮಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಈರಣ್ಣ ನಂದ್ಯಾಳ, ಶರಣಬಸವ ಕಟ್ಟಿಮನಿ ಇತರಿದ್ದರು.