ಶರಣರ ಬದುಕು ಅನುಕರಣೀಯ

31-gdg-6
Published on

ವಿಜಯವಾಣಿ ಸುದ್ದಿಜಾಲ ಗದಗ

ಲೋಕದಂತೆ ಬಾರರು, ಲೋಕದಂತೆ ಇರರು, ಲೋಕದಂತೆ ಹೋವರು ನೋಡಾ, ಪುಣ್ಯದಂತೆ ಬಪ್ಪರು, ಜ್ಞಾನದಂತೆ ಇಪ್ಪರು, ಮುಕ್ತಿಯಂತೆ ಪೋಪರು ನೋಡಾ ನಮ್ಮ ಕೂಡಲಸಂಗಮದೇವ ಎಂಬ ಶರಣ ನುಡಿಯಂತೆ ಬಾಳಿ ಬದುಕಿ ಲೋಕೋದ್ಧಾರ ಮಾಡಿದ ಅಪರೂಪದ ಸಂತ ಶ್ರೀ ಲಿಂ. ಚನ್ನವೀರ ಶರಣರು ಬದುಕು ಸರ್ವರಿಗೂ ಪ್ರೇರಣೆ ಮತ್ತು ಅನುಕರಣೀಯ ಎಂದು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ತಾಲೂಕಿನ ಬಳಗಾನೂರಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಚಿಕ್ಕೇನಕೊಪ್ಪಮಠದ ಶ್ರೀ ಚನ್ನವೀರ ಶರಣರ ಸಮುದಾಯ ಭವನ ಉದ್ಘಾಟಿಸಿ ಅವರು ಮಾತನಾಡಿದರು.

ಭಕ್ತರಿಗೆ ಪುಣ್ಯವನ್ನು ಹಂಚಿ ಅವರನ್ನು ಉತ್ತಮ ಮಾರ್ಗದಲ್ಲಿ ನಡೆಯಲು ಪ್ರೇರೇಪಿಸಿದ ಶರಣರು ತಾವು ಮಾತ್ರ ಲೋಕದ ಜಂಜಡದಿಂದ ದೂರ ಉಳಿದು ಜ್ಞಾನವಂತರಾದರು. ಸ್ಥಿತ ಪ್ರಜ್ಞರಾಗಿ ಬಾಳಿದರು. ಭಕ್ತರ ಪಾಲಿನ ಕಾಮಧೇನು, ಕಲ್ಪವೃಕ್ಷವಾಗಿ ಮನುಕುಲವನ್ನು ಉದ್ಧರಿಸಿದರು ಎಂದರು.

ಚನ್ನವೀರ ಶರಣರು ಜಗತ್ತಿಗೆ ಎಲ್ಲವನ್ನು ಕೊಟ್ಟು ತಾವು ಜ್ಞಾನಮೂರ್ತಿಯಾಗಿ ಬದುಕು ಸಾಗಿಸಿದರು. ಸರ್ವಸ್ವವನ್ನು ಭಕ್ತರ ಕಲ್ಯಾಣಕ್ಕೆ ಸೆವೆಸಿದರು. ಭಕ್ತರು ಭಗವಂತನ ಕೃಪೆಯಲ್ಲಿ ನಡೆಯಲು ತೋರಿಸಿಕೊಟ್ಟ ಮಹಾಪುರುಷರು. ಅವರ ಮಾರ್ಗದಲ್ಲಿ ನಡೆದ ಜನರು ತಮ್ಮ ಬದುಕಿನ ಗುರಿ ತಲುಪಿದ್ದಾರೆ ಎಂದರು.

ಲಿಂ. ಚನ್ನವೀರ ಶರಣರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶ್ರೀ ಶಿವಶಾಂತವೀರ ಶರಣ ಕಾರ್ಯವೈಖರಿ ಸ್ತುತ್ಯಾರ್ಹ. ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿರುವ ಸಮುದಾಯ ಭವನ ಸರ್ವ ಜನರಿಗೂ ಪ್ರಯೋಜನವಾಗಲಿ ಎಂದರು.

ಶಾಸಕ ಎಚ್.ಕೆ. ಪಾಟೀಲ ಮಾತನಾಡಿದರು. ಬಳಗಾನೂರು ಚಿಕ್ಕೇನಕೊಪ್ಪದ ಶ್ರೀ ಶಿವಶಾಂತವೀರ ಶರಣರು, ಜಿಪಂ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಅಲ್ಲಂ ವೀರಭದ್ರಪ್ಪ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಶಾಸಕರಾದ ಬಿ.ಆರ್. ಯಾವಗಲ್, ಡಿ.ಆರ್.ಪಾಟೀಲ, ಮಾಜಿ ಸಂಸದ ಬಸವರಾಜ ಪಾಟೀಲ ಅನ್ವರಿ, ಮಾಜಿ ಸಚಿವ ಎಸ್.ಎಸ್.ಪಾಟೀಲ, ಡಾ.ಆರ್.ಎಂ.ಕುಬೇರಪ್ಪ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಬಾಪೂಗೌಡ ಪಾಟೀಲ, ಜಿಪಂ ಸದಸ್ಯೆ ಲಲಿತಾ ಹುಣಸೀಕಟ್ಟಿ, ತಾಪಂ ಅಧ್ಯಕ್ಷ ಎಸ್.ಎಸ್.ಪಾಟೀಲ, ಬಳಗಾನೂರು ಗ್ರಾಪಂ ಅಧ್ಯಕ್ಷೆ ರೇಖಾ ದೊಡ್ಡಮನಿ, ಬಿ.ವೈ. ಡೊಳ್ಳಿನ ಮತ್ತಿತರರು ಇದ್ದರು.

ಸಮುದಾಯ ಭವನ ನಿರ್ವಣಕ್ಕೆ ಸಹಾಯ ಸಹಕಾರ ನೀಡಿದ ವಿಜಯಕುಮಾರ ಗಡ್ಡಿ, ಆರ್. ವಿ.ತಿಮ್ಮಾಪೂರ, ಪಾಲಾಕ್ಷಗೌಡ ಏಳಬೆಂಚಿ, ಚಂದ್ರಶೇಖರ ಹಿರೇಮಠ, ಸ್ವಪ್ನ ಉದಯಶಂಕರ, ವೀರಪ್ಪ ಬಿಸನಳ್ಳಿ ಅವರನ್ನು ಸನ್ಮಾನಿಸಲಾಯಿತು. ಶಿವಲಿಂಗ ಶಾಸ್ತ್ರೀ ಸಿದ್ದಾಪೂರ ನಿರೂಪಿಸಿದರು.

ಸ್ಥಿತಪ್ರಜ್ಞೆಯುಳ್ಳ ಶರಣರು: ಧಾರವಾಡದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಅಥಣಿಯ ಮುರುಘೇಂದ್ರ ಶಿವಯೋಗಿಗಳು, ಕಲಬುರಗಿಯ ಶರಣಬಸವೇಶ್ವರರು, ನಾಲತ್ವಾಡದ ವೀರೇಶ ಶರಣರ ನಂತರ ಸ್ಥಿತಪ್ರಜ್ಞೆಯುಳ್ಳ ಶರಣರ ಪೈಕಿ ಬಳಗಾನೂರು ಚನ್ನವೀರ ಶರಣರು ಮೊದಲಿಗರು ಎಂದರು. ಶರಣರ ಪಾದಸ್ಪರ್ಷದಿಂದ ಬಳಗಾನೂರು ಗ್ರಾಮ ಪಾವನ ಕ್ಷೇತ್ರವಾಯಿತು. ಅವರು ನೀಡಿದ ಸಂದೇಶ ಸಮಾಜದ ಉದ್ಧಾರಕ್ಕೆ ನಾಂದಿಯಾಯಿತು. ಅಂತಹ ಮಹಾತ್ಮರು ಹುಟ್ಟುವುದೇ ಅಪರೂಪ. ಚನ್ನವೀರ ಶರಣರು ಲಿಂಗೈಕ್ಯರಾದ ನಂತರ ಶ್ರೀ ಶಿವಶಾಂತವೀರ ಶರಣರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಗುರವಿಗೆ ತಕ್ಕ ಶಿಷ್ಯರಾಗಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net