

ಮುಂಡರಗಿ: ಪ್ರತಿವರ್ಷದಂತೆ ಕರ್ತೃ ಗದ್ದುಗೆಗೆ ವಚನಾಭಿಷೇಕ ಮೂಲಕ ಪ್ರವಚನ ಕಾರ್ಯಕ್ರಮ ಆರಂಭಗೊಳ್ಳುತ್ತಿವೆ. ಜು. 8ರಿಂದ 23ರ ವರೆಗೆ ನಿತ್ಯ ಸಂಜೆ 7 ಗಂಟೆಗೆ ಶರಣ ಚರಿತ್ರಾಮೃತ ಪ್ರವಚನ ನಡೆಯಲಿದೆ ಎಂದು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಆಷಾಢ ಮಾಸದ ಪ್ರಯುಕ್ತ ಗುರುವಾರ ಜರುಗಿದ ಕರ್ತೃ ಗದ್ದುಗೆಗೆ ವಚನಾಭಿಷೇಕ ಹಾಗೂ ಶರಣ ಚರಿತ್ರಾಮೃತ ಪ್ರವಚನ ಕರಪತ್ರ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪ್ರವಚನ ಜು.8ರಂದು ಆರಂಭವಾಗಿ ಜು. 22ರಂದು ಮಂಗಲಗೊಳ್ಳಲಿದೆ. ಮುಂಡಗೋಡದ ಅತ್ತಿವೇರಿ ಬಸವಧಾಮದ ಶ್ರೀ ಬಸವೇಶ್ವರಿ ಮಾತಾಜಿ ಅವರು ಪ್ರತಿದಿನ ಪ್ರವಚನ ನಡೆಸಿಕೊಡುವರು. ಪ್ರವಚನ ಕೊನೆಯಲ್ಲಿ ಎರಡು ದಿನ ಜನಪದ ಸಂಸ್ಕೃತಿ, ಪರಿಸರ ಸಂಸ್ಕೃತಿ ವಿಶೇಷ ಕಾರ್ಯಕ್ರಮ ಜರುಗಲಿವೆ. ಜು.23ರಂದು ಬೆಳಗ್ಗೆ ವೈಭವದಿಂದ ವಚನ ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ತಿಳಿಸಿದರು.
ಜಗತ್ತಿನಲ್ಲಿ ಶಾಂತಿ ವಾತಾವರಣ ನಿರ್ಮಾಣವಾಗಬೇಕು. ಮನುಷ್ಯನ ಶಾಂತಿಗಾಗಿ ಪ್ರವಚನ, ಧರ್ಮ ಬೋಧನೆ ನಡೆಸಲಾಗುತ್ತದೆ. ಶಾಂತಿ, ಆರ್ಥಿಕ ಭದ್ರತೆ ಹಾಗೂ ಕುಟುಂಬ ಧರ್ಮ ಉಳಿಸಲು ಪ್ರವಚನ ಸಹಕಾರಿಯಾಗಲಿದೆ. ಉತ್ತಮ ವಿಚಾರ ಚಿಂತನೆ ಅಂಶಗಳನ್ನೊಳಗೊಂಡ ಪ್ರವಚನ ನಡೆಯಲಿದೆ ಎಂದರು.
ಕರ್ತೃ ಗದ್ದುಗೆಗೆ ವಿಶೇಷ ವಚನಾಭಿಷೇಕ ಪೂಜೆ ಸಲ್ಲಿಸಲಾಯಿತು. ಪ್ರವಚನ ಸಮಿತಿ ಅಧ್ಯಕ್ಷ ಬಸಯ್ಯ ಗಿಂಡಿಮಠ, ಉಪಾಧ್ಯಕ್ಷ ಎಚ್. ವಿರೂಪಾಕ್ಷಗೌಡ್ರ, ಕಾರ್ಯದರ್ಶಿ ವೀರಪ್ಪ ಮಡಿವಾಳರ, ಡಾ. ಅನ್ನದಾನಿ ಮೇಟಿ, ಕೊಟ್ರೇಶ ಅಂಗಡಿ, ಎಸ್.ಎಸ್. ಗಡ್ಡದ, ಪಾಲಾಕ್ಷಿ ಗಣದಿನ್ನಿ, ಶಿವಯೋಗಿ ಕೊಪ್ಪಳ, ಪವನ ಚೋಪ್ರಾ, ದೇವು ಹಡಪದ, ಡಿ.ಜಿ. ಪೂಜಾರ, ಗಿರೀಶ ಪಾಟೀಲ, ಸದಾಶಿವಯ್ಯ ಕಬ್ಬೂರಮಠ, ಶಿವು ವಾಲಿಕಾರ, ಶರಣಪ್ಪ ಕುಬಸದ, ಹಿರೇಮಠ, ಸುಕನ್ಯಾ ಕಬ್ಬೂರಮಠ, ಶಿವಗಂಗಾ ನವಲಗುಂದ, ಗೀತಾ ಬಣಕಾರ, ಮಂಗಳಾ ಕರ್ಜಗಿ, ಪ್ರಭಾವತಿ ಕುಬಸದ, ಪಾರ್ವತಿ ಕುಬಸದ ಇತರರು ಇದ್ದರು.