ಕಾಯಕದ ಅರಿವು ಮೂಡಿಸಿದ ಶರಣರು

NRD PRAVACHAN
Published on

ನರಗುಂದ: ದುಡಿಯದೇ ಉಣ್ಣಬೇಡ, ಉಣ್ಣದೇ ಮಲಗಬೇಡ, ಉಕ್ತಿಯಂತೆ, ಕಾಯವನು ದಂಡಿಸಿ ನಿತ್ಯ ಕಾಯಕದ ಅರಿವು ಮೂಡಿಸಿದವರು ಶಿವಶರಣ ಜೇಡರ ದಾಸಿಮಯ್ಯನವರು ಎಂದು ಡೋಣಿಯ ಶಶಿಧರ ಶಾಸ್ತ್ರೀಗಳು ಹೇಳಿದರು.

ಶಿರೋಳ ತೋಂಟದಾರ್ಯಮಠದ ಚರಮೂರ್ತಿಗಳ ನೂತನ ಗದ್ದುಗೆ ಶಿಲಾ ಮಂಟಪ ಮತ್ತು ಗೋಪುರ ಕಳಸಾರೋಹಣ ನಿಮಿತ್ತ ನಡೆಯುತ್ತಿರುವ ಬಸವ ಪುರಾಣದಲ್ಲಿ ಅವರು ಪ್ರವಚನ ನೀಡಿದರು. ರೆಕ್ಕೆ ಎರಡು ಪಕ್ಷಿ ಒಂದೇ, ಕಣ್ಣು ಎರಡು ನೋಟ ಒಂದೇ. ಇದು ಸೃಷ್ಟಿಯ ಕೌತುಕವಾದರೆ, ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶರಣರ ವಿಚಾರಧಾರೆಗಳು ಒಂದೇ ಆಗಿರುವುದು ಕಲ್ಯಾಣ ಕ್ರಾಂತಿಗೆ ಕಾರಣವಾಯಿತು ಎಂದರು.

ಬಿದಿರು ಸೀಳಿ ಬುಟ್ಟಿ ಮಾಡಿ, ಮಾರಾಟ ಮಾಡುವ ಶರಣ ಮೇದಾರ ಕೇತಯ್ಯ ಎದೆಯಲ್ಲಿ ನೆಟ್ಟ ಬಿದಿರಿನ ನೋವನ್ನು ಲೆಕ್ಕಿಸದೆ ಮಡಿದಿ ಸಾತವ್ವೆ ಜೊತೆಗೂಡಿ ನಿತ್ಯದ ಜಂಗಮ ದಾಸೋಹ ಸೇವೆ ಮಾಡಿದ ರೋಚಕ ವಿಷಯ ಶರಣ ಹೂಗಾರ ಮಾದಯ್ಯನವರ ಮೂಲಕ ಬಸವಣ್ಣನವರಿಗೆ ತಲುಪಿತು. ಆಗ ಅವರು ಮಮ ಪ್ರಾಣ, ಮಮ ಜಂಗಮ ಎನ್ನುವಂತೆ ಶಿವನ ಮೊರೆ ಹೋದರು. ಘಂಟೆ ಹರಿದು ಬೀಳುವಂತೆ ಬಾರಿಸಿದ ವೀರಘಂಟಿ ಮಾಚಿದೇವರ ಪ್ರಾರ್ಥನೆ ಶಿವ ಸಾನ್ನಿಧ್ಯ ತಲುಪಿತು. ಕೇತಯ್ಯನವರ ದೇಹದ ಅಗಾದ ನೋವು ಮಾಯವಾಯಿತು. ಈ ಮೂಲಕ ಸೇವಾ ಪ್ರವೃತ್ತಿಯ ಮಹತ್ವವನ್ನು ಜಗತ್ತಿಗೆ ಸಾರಿದವರು ಎಂದರು.

ಈ ವೇಳೆ ದಾಸೋಹ ದಾನಿಗಳಾದ ಗಜೇಂದ್ರಗಡದ ನವೀನ ಹೊನವಾಡ ಮತ್ತು ಶಿರೋಳ ಪಿಡಿಒ ಮಳ್ಳಪ್ಪ ಪೂಜಾರ ಅವರನ್ನು ಸತ್ಕರಿಸಲಾಯಿತು. ಬಸವ ಪುರಾಣದ ಐದನೇ ಕಾಂಡದ ಮುಕ್ತಾಯದಲ್ಲಿ ಚಿಕ್ಕೋಡಿ ಸಂಪಾದನಾಮಠದ ಶ್ರೀ ಸಂಪಾದನಾ ಮಹಾಸ್ವಾಮಿಗಳು, ಶಾಂತಲಿಂಗ ಸ್ವಾಮಿಗಳು ಆಶೀರ್ವಚನ ನೀಡಿದರು.

ಸಂಗಮೇಶ ಪಾಟೀಲ ಕಲಬುರ್ಗಿ, ಅಡವೇಶಕುಮಾರ ಅವರ ಸಂಗೀತ ಸೇವೆ ನೆರವೇರಿತು. ಚಿಂಚಣಿಯ ಅಲ್ಲಮಪ್ರಭು ಸಿದ್ಧ ಸಂಸ್ಥಾನಮಠದ ಸದ್ಭಕ್ತರು ಸಂಜು ಪರೀಟ, ಅರುಣ ಕರೆಪ್ಪಗೋಳ, ಬಸವರಾಜ ಪಾಟೀಲ, ದೀಪಕ ಮುದ್ದಾಗೋಳ, ಅಪ್ಪಾಸಾಬ್ ಬಸರೆಪ್ಪಗೋಳ, ಬಸವರಾಜ ಕರೆಪ್ಪಗೋಳ, ಬಾಳು ಕರೆಪ್ಪಗೋಳ, ಮಲ್ಲಪ್ಪ ಪರೀಟ, ಭರತೇಶ ದೊಡ್ಡಣ್ಣವರ, ವಿಜಯ ಬೇಲೆಕಾರ, ಮಹಾಂತೇಶ ಉಳ್ಳಾಗಡ್ಡಿ, ಸ್ಥಳೀಕರಾದ ತಿಪ್ಪಣ್ಣ ಮ್ಯಾದರ, ಹೇಮಣ್ಣ ನಿಂಗರಡ್ಡಿ, ಪವಾಡೆಪ್ಪ ಮಾಡಲಗೇರಿ, ದೇವೆಂದ್ರಪ್ಪ ಶಾಂತಗೇರಿ, ಸಿದ್ದಣ್ಣ ಹದ್ಲಿ, ಶಿವಲಿಂಗಪ್ಪ ಕುಪ್ಪಸ್ತ, ಚಂದ್ರಗೌಡ ಪಾಟೀಲ, ಸುರೇಶ ಕುಲಕರ್ಣಿ, ಗಂಗಯ್ಯ ವಸ್ತ್ರದ, ದುರಗಪ್ಪ ಮೂಲಿಮನಿ, ದ್ಯಾಮಣ್ಣ ಶಾಂತಗೇರಿ, ಶ್ರೀಕಾಂತ ದೊಡಮನಿ, ಶೀಧರ ಬೇವಿನಕಟ್ಟಿ, ಮಲ್ಲಪ್ಪ ಸಂಗಳದ, ಶಂಕರಗೌಡ ಗಿರಿಯಪ್ಪಗೌಡ್ರ, ಸರಸ್ವತಿ ಗಾಣಗೇರ, ಗಂಗಾಧರ ಫಾರಗೆ, ಶಿವಾನಂದ ಪೂಜಾರ, ಚಂದ್ರಕಾಂತ ಕಾಡದೇವರಮಠ, ಇತರರಿದ್ದರು.

ಶಂಕರಪ್ಪ ಕುಪ್ಪಸ್ತ ಹಾಗೂ ಬಸವರಾಜ ಸಾಲಿಮಠ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net