

ಮೈಸೂರು: ಶರಣರ ನುಡಿ ಸಮಾಜವನ್ನು ಎಚ್ಚರಿಸುವ ಹಾಗೂ ಜನರ ನಡವಳಿಕೆಯನ್ನು ತಿದ್ದುವ ಸಾಹಿತ್ಯವಾಗಿತ್ತು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ಶರಣ ಸಾಹಿತ್ಯ ಪರಿಷತ್ತು ನಗರ ಘಟಕದಿಂದ ವಾಣಿ ವಿಲಾಸ ರಸ್ತೆಯಲ್ಲಿರುವ ಕೆಎಸ್‌ಎಸ್ ಸಂಸ್ಕೃತ ಪಾಠ ಶಾಲೆ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ಆಯೋಜಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ವಚನ ಗಾಯನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶರಣರು ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಸಾಹಿತ್ಯ ರಚಿಸುವ ಮೂಲಕ ಸಮಾಜವನ್ನು ಎಚ್ಚರಿಸುವ ಹಾಗೂ ಜನರ ನಡವಳಿಕೆ ತಿದ್ದುವ ಕಾರ್ಯ ಮಾಡಿದರು. ಈ ಮೂಲಕ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಶ್ರೀಮಂತಗೊಳಿಸಿದರು ಎಂದು ಬಣ್ಣಿಸಿದರು.
ತಂದೆ-ತಾಯಿಗಿಂತ ಶ್ರೇಷ್ಠರಾದವರು ಯಾರೂ ಇಲ್ಲ. ಇದನ್ನು ಅರಿತು ತಾವು ಅವರ ಮನ ನೋಯಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಪರಿಷತ್ತು ಯುವ ಜನಾಂಗದಲ್ಲಿ ಶರಣರ ತತ್ವಗಳನ್ನು ಬಿತ್ತುತ್ತಿರುವುದು ಸಂತೋಷ ಎಂದು ಹೇಳಿದರು.
ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ ಮಾತನಾಡಿ, ನಗರದ ಶರಣ ಸಾಹಿತ್ಯ ಪರಿಷತ್ತಿನಲ್ಲಿ 75 ದತ್ತಿಗಳನ್ನು ಹೊಂದಿದ್ದು, ನಿರಂತರ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಈ ಮೂಲಕ ಶರಣರ ಆದರ್ಶವನ್ನು ಯುವ ಜನಾಂಗಕ್ಕೆ ತಿಳಿಸಿಕೊಡುವ ಕೆಲಸ ನಡೆಯುತ್ತಿದೆ ಎಂದರು.
ಶೈಲಾ ಸಿದ್ದರಾಮಪ್ಪ, ಸುಗುಣ, ಬಿ.ಎಂ.ಸಿದ್ದಲಿಂಗಸ್ವಾಮಿ ಅವರು ವಚನಗಳನ್ನು ಸುಶ್ರಾವ್ಯವಾಗಿ ಹಾಡಿದರು. ಅದೇ ವಚನಗಳನ್ನು ಕುರಿತು ಸದಾಶಿವಮೂರ್ತಿ, ಡಿ.ಎಸ್.ಮಹೇಶ್ವರಿ, ಡಾ.ಕೆ.ಎಸ್.ಮಲ್ಲೇಶ್ ಮನಮುಟ್ಟುವಂತೆ ವ್ಯಾಖ್ಯಾನಿಸಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಶಿವಕುಮಾರ್, ಪರಿಷತ್ತಿನ ಕಾರ್ಯದರ್ಶಿ ಟಿ.ಎಸ್.ಕುಮಾರಸ್ವಾಮಿ, ನಿಲಯಪಾಲಕ ಪಿ.ಮಲ್ಲೇಶ್, ಆಯೋಜಕರಾದ ಡಾ.ಡಿ.ಎಸ್.ಗುರು, ಶಾರದಾ ಶಿವಲಿಂಗಸ್ವಾಮಿ, ನೀಲಾಂಬಿಕಾ, ಶೈಲಜಾ, ಮುದ್ದು ಮಲ್ಲೇಶ್ ಇತರರು ಇದ್ದರು.