

ಮುದ್ದೇಬಿಹಾಳ: ಮನೆಯಲ್ಲಿ ಮಹಾಮನೆ, ಬಸವ ಸಮಿತಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ವೀರಶೈವ ಮಹಾಸಭೆ ಮತ್ತು ಬಸವಾಭಿಮಾನಿ ಸಂಘಟನೆಗಳ ನೂರಾರು ಸದಸ್ಯರು ಬಸವಾದಿ ಶರಣರ ಚರಿತ್ರೆಯನ್ನು ಅವಮಾನಿಸುವ ಅಂಶಗಳುಳ್ಳ ಶರಣ ಶಕ್ತಿ ಚಲನಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿ ಮಂಗಳವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಿ ಗ್ರೇಡ್-2 ತಹಸೀಲ್ದಾರ್ ಜಿ.ಎಸ್.ಕಟ್ಟಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಗ್ರಾಮದೇವತೆ ಕಟ್ಟೆಯಿಂದ ಬಸವೇಶ್ವರ ವೃತ್ತ, ಕಿತ್ತೂರು ಚನ್ನಮ್ಮ ಮಹಾದ್ವಾರ ಮಾರ್ಗವಾಗಿ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಬಹಿರಂಗ ಸಭೆ ನಡೆಸಿದ ಬಸವಾಭಿಮಾನಿಗಳಾದ ಅರವಿಂದ ಕೊಪ್ಪ, ವೀರಶೈವ ಮಹಾಸಭೆಯ ಅಧ್ಯಕ್ಷ ವೆಂಕನಗೌಡ ಪಾಟೀಲ, ಪುರಸಭೆ ಸದಸ್ಯೆಯರಾದ ಸಹನಾ ಬಡಿಗೇರ, ಸಂಗಮ್ಮ ದೇವರಳ್ಳಿ, ಸಾಹಿತಿಗಳಾದ ಅಶೋಕ ಮಣಿ, ಸಿ.ಬಿ.ಇಟಗಿ, ಎಸ್.ಬಿ.ತುರಡಗಿ ಇನ್ನಿತರರು ಶರಣರ ಅವಮಾನದ ಅಂಶಗಳ ಕುರಿತು ಮಾತನಾಡಿ ಖಂಡಿಸಿದರು.
ಆ ಚಲನಚಿತ್ರದಲ್ಲಿ ಬಸವಾದಿ ಶರಣರ ಚರಿತ್ರೆಯನ್ನು ಅವಮಾನಿಸುವ ಸಾಕಷ್ಟು ಅಂಶಗಳಿದ್ದು, ಅವು ಶರಣ ಸಂಸ್ಕೃತಿಯ ಬಗ್ಗೆ ಕೆಟ್ಟ ಅಭಿಪ್ರಾಯ, ಭಾವನೆ ವ್ಯಕ್ತಪಡಿಸುವಂತಿವೆ. ಈ ಚಲನಚಿತ್ರದ ಬಿಡುಗಡೆಗೆ ಸರ್ಕಾರ ಅವಕಾಶ ಮಾಡಿಕೊಡಬಾರದು. ಇದನ್ನು ನಿರ್ಬಂಧಿಸಬೇಕು. ಇಲ್ಲವಾದಲ್ಲಿ ಬಸವಾಭಿಮಾನಿಗಳ ಆಕ್ರೋಶ ಉಗ್ರ ಪ್ರತಿಭಟನೆಯಾಗಿ ಹೊರಹೊಮ್ಮಬಹುದಾಗಿದೆ ಎಂದರು.
ವಿವಿಧ ಬಸವಾಭಿಮಾನಿ ಬಳಗಗಳ ಪ್ರಮುಖರಾದ ಎಸ್.ಬಿ.ಕನ್ನೂರ, ಬಿ.ವಿ.ಕೋರಿ, ಬಿ.ಎಂ.ರಾಂಪೂರ, ಎಸ್.ಎಸ್.ಕರಡ್ಡಿ, ಸಂಗಣ್ಣ ಕಟ್ಟಿ, ಅಬ್ದುಲರಹಮಾನ್ ಬಿದರಕುಂದಿ, ಅಶೋಕ ನಾಡಗೌಡ, ಎಚ್.ಬಿ.ದಳವಾಯಿ, ಎಸ್.ಎಲ್.ಗುರವ, ಚಂದ್ರಶೇಖರ ನಾಗರಾಳ, ಸಂಗಮೇಶ ಶಿವಣಗಿ, ಶಸಾಪ ಅಧ್ಯಕ್ಷ ಬಸವರಾಜ ನಾಲತವಾಡ, ಕ್ರಿಯೇಟಿವ್ ಫ್ರೆಂಡ್ಸ್ ಕ್ಲಬ್ ಬಳಗದ ಅಧ್ಯಕ್ಷ ಸಿದ್ದರಾಜ ಹೊಳಿ, ಎನ್.ಬಿ.ಮೊಕಾಶಿ ವಕೀಲರು, ಬಾಪೂಗೌಡ ಪಾಟೀಲ ಆಲೂರ, ಅಶೋಕ ರೇವಡಿ, ಲೋಹಿತ ನಾಲತವಾಡ, ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಪುರಸಭೆ ಸದಸ್ಯರಾದ ಚನ್ನಪ್ಪ ಕಂಠಿ, ಪ್ರತಿಭಾ ಅಂಗಡಗೇರಿ, ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಮಹಾದೇವಿ ಕಿಣಗಿ, ವಿಜಯಲಕ್ಷ್ಮೀ ಗಡೆದ, ಸರೋಜಾ ಕೋರಿ, ಗೀತಾ ಪ್ಯಾಟಿಗೌಡರ, ಚಂದ್ರಶೇಖರ ಪ್ಯಾಟಿಗೌಡರ ಇತರರಿದ್ದರು.