10 ದಿನದಲ್ಲಿ ಶರಣ್ ಪಂಪ್‌ವೆಲ್ ಚಿಕ್ಕಮಗಳೂರಿಗೆ

mahendra
Published on

ಬಾಳೆಹೊನ್ನೂರು: ವಿಶ್ವ ಹಿಂದು ಪರಿಷತ್‌ನ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್‌ಗೆ ಜಿಲ್ಲೆಗೆ ಬರದಂತೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಿ ಹತ್ತು ದಿನದೊಳಗೆ ಅವರನ್ನು ಜಿಲ್ಲೆಗೆ ಕರೆಯಿಸಿ ಅದ್ಧೂರಿಯಾಗಿ ಸ್ವಾಗತ ಕೋರಿ ಮೆರವಣಿಗೆ ನಡೆಸಲಾಗುವುದು ಎಂದು ವಿಹಿಂಪ ಹಾಸನ ವಿಭಾಗದ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಹೇಳಿದರು.

ಶರಣ್ ಪಂಪ್‌ವೆಲ್ ಅವರ ಮೇಲಿದ್ದ 22 ಪ್ರಕರಣಗಳಲ್ಲಿ 15 ಪ್ರಕರಣಗಳನ್ನು ನ್ಯಾಯಾಲಯ ವಜಾ ಮಾಡಿದೆ. ಇನ್ನು 7 ಪ್ರಕರಣಗಳಿಗೆ ಹೈಕೋರ್ಟ್ ತಡೆ ನೀಡಿದೆ. ಆದರೆ ಇದನ್ನು ಗಮನಿಸದ ಜಿಲ್ಲಾಡಳಿತ ಒಬ್ಬ ಹೋರಾಟಗಾರನನ್ನು ಜಿಲ್ಲೆಗೆ ಬರದಂತೆ ತಡೆಯೊಡ್ಡಲಾಗಿದೆ. ಸಂವಿಧಾನದಡಿ ನೀಡಿದ ವಾಕ್ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಕೆಲಸವನ್ನು ಜಿಲ್ಲಾಡಳಿತ ಮಾಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಚಿಕ್ಕಮಗಳೂರು ನಗರದಲ್ಲಿ ಸಂಘಟನೆ ವಿಸ್ತರಿಸುವ ಉದ್ದೇಶದಿಂದ ತಿಂಗಳ ಬೈಠಕ್‌ಗೆ ಚಿಕ್ಕಮಗಳೂರು, ಆಲ್ದೂರು, ಮೂಡಿಗೆರೆಗೆ ಬರಬೇಕಾಗಿತ್ತು. ಆದರೆ ಜಿಲ್ಲಾಡಳಿತ ಒಂದು ತಿಂಗಳು ಜಿಲ್ಲೆಗೆ ಬರದಂತೆ ನಿರ್ಬಂಧ ಹೇರಿದೆ. ಶರಣ್ ಪಂಪ್‌ವೆಲ್ 20 ವರ್ಷಗಳಿಂದ ಜಿಲ್ಲೆಗೆ ಬರುತ್ತಿದ್ದಾರೆ. ಸಂಘಟನೆ ವಿಸ್ತರಣೆ, ಪ್ರತಿಭಟನೆಯಲ್ಲಿ ನಿರಂತರವಾಗಿ ಇದ್ದಾರೆ. ಇದೂವರೆಗೂ ಅವರು ಪಾಲ್ಗೊಂಡ ಪ್ರತಿಭಟನೆ, ಬೈಠಕ್‌ಗಳಿಂದ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net