

ಮಡಿಕೇರಿ:
ನೀಟ್ ಎಕ್ಸಾಂನಲ್ಲಿ ಬಹುದೊಡ್ಡ ಹಗರಣ ನಡೆದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಆರೋಪಿಸಿದ್ದಾರೆ. ಶುಕ್ರವಾರ ಮಡಿಕೇರಿಯಲ್ಲಿ ಮಾತನಾಡಿದ ಅವರು ಪಾರದರ್ಶಕವಾಗಿ ಪರೀಕ್ಷೆ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ನೀಟ್ ಪರೀಕ್ಷೆ ಮಾತ್ರವಲ್ಲ ಬೇರೆ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ.
ಕೇಂದ್ರ ಸರ್ಕಾರ ಈ ಹಗರಣದಲ್ಲಿ ಯಾರನ್ನೋ ರಕ್ಷಿಸಲು ನೋಡುತ್ತಿದೆ ಎಂದ ಅವರು ಈತನಕ ಯಾರ ಮೇಲೆ ಕ್ರಮ ಕೈಗೊಂಡಿದೆ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು. ಸಿಬಿಐ ತನಿಖೆಯಾಗಿ ಕ್ರಮ ಆಗಬೇಕಿತ್ತು. ಇಲ್ಲಿ ಏನೂ ಆಗಿಲ್ಲ. ಸಿಇಟಿ ಮೂಲಕ ನಾವು ಕರ್ನಾಟಕದಲ್ಲಿ ಪಾರದರ್ಶಕ ಎಕ್ಸಾಂ ನಡೆಸುತ್ತಿದ್ದೇವೆ. ಪಾರದರ್ಶಕತೆಯಲ್ಲಿ ದೇಶಕ್ಕೆ ಕರ್ನಾಟಕ ಮಾದರಿಯಾಗಿದೆ. ನೀಟ್ ಎಕ್ಸಾಂ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಇದು ದೇಶದಲ್ಲಿ ನಡೆದ ಬಹುದೊಡ್ಡ ಹಗರಣ. ಇಷ್ಟು ವರ್ಷಗಳ ಹಗರಣ ಹೊರಬರಬೇಕು.
ದೇಶದಲ್ಲಿ ೨೪ ಲಕ್ಷ ಮಕ್ಕಳ ಜೊತೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ. ಸಿಬಿಐಗೆ ಕೇಸ್ ವರ್ಗಾವಣೆ ಆಗಿರುವುದರಿಂದ ಸಾಕಷ್ಟು ಅಕ್ರಮ ಹೊರ ಬಂದಿದೆ. ಕೇಂದ್ರ ಸರ್ಕಾರ ಯುವಕರ ಭವಿಷ್ಯದ ಜೊತೆ ಆಟವಾಡುತ್ತಿದೆ. ಯುವಕರ ಭಾವನೆಯನ್ನ ಅರ್ಥ ಮಾಡಿಕೊಳ್ಳುವ ಶಕ್ತಿ ಕೇಂದ್ರಕ್ಕಿಲ್ಲ ಎಂದರು.